ಮಳೆ ಹಾನಿ; ಪರಿಹಾರ ವಿತರಣೆಗೆ ಎಚ್‍.ಡಿ.ರೇವಣ್ಣ ಆಗ್ರಹ

Prasthutha|

ಹಾಸನ: ಕಳೆದ ಒಂದು ವಾರದಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಜಿಲ್ಲೆಯಲ್ಲಿ ನೂರಾರು ಎಕರೆಯಲ್ಲಿ ಬೆಳೆ ನಾಶವಾಗಿದ್ದು, ರಸ್ತೆಗಳು ಹಾಳಾಗಿವೆ. ತಕ್ಷಣವೇ ಮುಖ್ಯಮಂತ್ರಿ ಜಿಲ್ಲಾಧಿಕಾರಿಗಳ ಸಭೆ ನಡೆಸಿ ಹಾನಿ ಮಾಹಿತಿ ಪಡೆದು ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಚಿವ, ಶಾಸಕ ಎಚ್‍.ಡಿ.ರೇವಣ್ಣ ಒತ್ತಾಯಿಸಿದರು.

- Advertisement -

ಸಂಸದರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೇವಣ್ಣ, ಭಾರಿ ಮಳೆಯಿಂದ ಜನ ಜೀವನ ಅಸ್ತವ್ಯಸ್ತವಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾಡಳಿತದಿಂದ ಮಾಹಿತಿ ಪಡೆದು ಈ ವೇಳೆಗಾಗಲೇ ಪರಿಹಾರ ವಿತರಣೆಗೆ ಕ್ರಮಕೈಗೊಳ್ಳಬೇಕಿತ್ತು. ಅಲ್ಲದೆ ಕೇಂದ್ರ ಸಚಿವರು ಹಾಸನದಲ್ಲೇ ವಾಸ್ತವ್ಯ ಹೂಡಿದ್ದು, ಅವರ ಮೂಲಕ   ಜಿಲ್ಲೆಯ ಪರಿಸ್ಥಿತಿ ಬಗ್ಗೆ  ಪ್ರಧಾನಿಗಳ ಗಮನಕ್ಕೆ ತರಬಹುದಿತ್ತು. ಆದ್ರೆ ಹಾಸನ ಜಿಲ್ಲೆಯ ಮಳೆ ಹಾನಿ ಬಗ್ಗೆ ಯಾರೂ ಗಮನ ಹರಿಸುತ್ತಿಲ್ಲ ಎಂದು ದೂರಿದ ರೇವಣ್ಣ, ಕೂಡಲೇ ಮುಖ್ಯಮಂತ್ರಿಗಳು ಎಲ್ಲಾ ಜಿಲ್ಲಾಧಿಕಾರಿಗಳ ಸಭೆ ಕರೆದು, ಮಳೆಯಿಂದ ಆಗುತ್ತಿರುವ ಹಾನಿಗಳ ಬಗ್ಗೆ ಮಾಹಿತಿ ಪಡೆದು ಪರಿಹಾರ ನೀಡುವತ್ತ ಗಮನಹರಿಸಬೇಕು ಎಂದು ಆಗ್ರಹಿಸಿದರು.

ಕಳೆದ 6 ತಿಂಗಳಿಂದ ಕೆಡಿಪಿ ಸಭೆ ನಡೆಸಿಲ್ಲ. ಜಿಲ್ಲೆಯಲ್ಲಿ ಕೆಲವೇ ಅಧಿಕಾರಿಗಳು, ಕೆಲವೇ ಜನರ ಕೈಯಲ್ಲಿ ಆಡಳಿತವಿದೆ. ನಾವೂ ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳು ಇದ್ದೇವೆ ಎಂಬುದನ್ನು ಅವರು ಮರೆತಂತಿದೆ.  ಜಿಲ್ಲಾದ್ಯಂತ ಮಳೆಯಿಂದ ಹಾನಿಯಾಗಿದೆ. ಕಳೆದ ವರ್ಷವೂ ಮಳೆಹಾನಿ ಪರಿಹಾರವನ್ನು ನೀಡಿಲ್ಲ. ಹಾಸನ ನಗರಕ್ಕೆ 18 ಕೋಟಿ ಮಾತ್ರ ನೀಡಿದ್ದಾರೆ. ಹಾಸನ ನಗರ ಯಾವ ರೀತಿ ಉಳಿದ ಭಾಗಕ್ಕಿಂತ ಹೆಚ್ಚು ಮಳೆಹಾನಿಗೊಳಗಾಗಿತ್ತೋ ಗೊತ್ತಿಲ್ಲ ವ್ಯಂಗ್ಯವಾಡಿದರು.

- Advertisement -

ಹಾಸನದ ವಿಮಾನ ನಿಲ್ದಾಣ ಮೋದಿ ಕೊಡುಗೆ ಎಂಬ ಕೇಂದ್ರ ಸಚಿವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕೇಂದ್ರ ಸಚಿವರು ದಾಖಲೆಗಳನ್ನು ತೆಗೆದು ನೋಡಬೇಕು. ಮೋದಿಯವರು ದೆಹಲಿಗೆ ಬರುವ ಮುಂಚೆಯೇ ವಿಮಾನ ನಿಲ್ದಾಣ ಘೋಷಣೆಯಾಗಿತ್ತು. ಅವರದೇ ಸರ್ಕಾರದಲ್ಲಿ ಸಚಿವರಾಗಿರುವ ರಾಜೀವ ಚಂದ್ರಶೇಖರ್‍ ಅವರ ಕಂಪನಿಯೇ ವಿಮಾನನಿಲ್ದಾಣ ಕಾಮಗಾರಿಯ ಟೆಂಡರ್‍ ಪಡೆದಿದ್ದರು.  ಹಾಸನದ ವಿಮಾನ ನಿಲ್ದಾಣಕ್ಕೆ ಅಡಿಗಲ್ಲಾಕಿದ್ದು ದೇವೇಗೌಡರು. ಈ ಬಗ್ಗೆ ಮಾಹಿತಿ ತೆಗೆದುಕೊಳ್ಳಲಿ ಎಂದರು.

ದೇವಿಲಾಲ್ ಕುಟುಂಬಕ್ಕೆ ದೇವೇಗೌಡರ ಕುಟುಂಬವನ್ನು ಹೋಲಿಸಿ ಭವಿಷ್ಯ ನುಡಿದಿದ್ದಾರೆ. 2023ರ ಚುನಾವಣೆ ಎಲ್ಲಾದಕ್ಕೂ ಉತ್ತರ ನೀಡಲಿದೆ. ಬಿಜೆಪಿಗೆ ಏನಾಗುತ್ತೆ, ದೇವೇಗೌಡರ ಕುಟುಂಬಕ್ಕೆ ಏನಾಗುತ್ತೆ ಎಂಬುದನ್ನು ಕಾದು ನೋಡೋಣ. 2023ರ ರಣರಂಗಕ್ಕೆ ನಾವು ಸಜ್ಜಾಗಿದ್ದೇವೆ. ಮುಂದಿನ ಚುನಾವಣೆಗೆ ಜೆಡಿಎಸ್ ಯುದ್ದೋಪಾದಿಯಲ್ಲಿ  ಸಿದ್ಧತೆ ನಡೆಸಿದೆ ಎಂದರು.

ದೇವೇಗೌಡರ ಕುಟುಂಬವನ್ನು ಕಾಂಗ್ರೆಸ್ ನವರೋ ಬಿಜೆಪಿಯವರೋ ಮುಗಿಸಲು ಸಾಧ್ಯವಿಲ್ಲ. ಇಂತಹ ಹತ್ತು ಜನ ಮಂತ್ರಿಗಳು ಹಾಸನಕ್ಕೆ ಬರ್ಲಿ, ದೇವರ ಹಾಗೂ ಜನರ ಆಶೀರ್ವಾದ ಇರುವವರೆಗೂ ನಮ್ಮ ಕುಟುಂಬಕ್ಕೆ ಯಾರೂ ಏನನ್ನೂ ಮಾಡಲಾಗಲ್ಲ ಎಂದರು.



Join Whatsapp