ನವದೆಹಲಿ: ಆಗಸ್ಟ್ ತಿಂಗಳಲ್ಲಿ ದೇಶಾದ್ಯಂತ ರೈಲುಗಳ ಹಳಿ ತಪ್ಪಿಸಲು 18 ಪ್ರಯತ್ನಗಳು ನಡೆದಿವೆ ಎಂದು ಭಾರತೀಯ ರೈಲ್ವೇ ಅಧಿಕಾರಿಗಳು ಹೇಳಿದ್ದಾರೆ.
ಕಾನ್ಪುರ ಮತ್ತು ಅಜ್ಮೀರ್ ನಲ್ಲಿ ಭಾನುವಾರ ಎರಡು ಪ್ರಯತ್ನಗಳು ವರದಿಯಾಗಿದ್ದು, ಜೂನ್ 2023ರಿಂದ ಇಲ್ಲಿಯವರೆಗೆ ಇಂತಹ 24 ಘಟನೆಗಳು ನಡೆದಿವೆ ಎಂದು ಮೂಲಗಳು ತಿಳಿಸಿವೆ.
ಎಲ್ ಪಿಜಿ ಸಿಲಿಂಡರ್ ಗಳು, ಬೈಸಿಕಲ್ ಗಳು, ಕಬ್ಬಿಣದ ರಾಡ್ ಗಳು ಮತ್ತು ಸಿಮೆಂಟ್ ಬ್ಲಾಕ್ ಗಳು ಸೇರಿದಂತೆ ರೈಲು ಹಳಿಗಳ ಮೇಲೆ ಇರಿಸಲಾದ ವಿವಿಧ ರೀತಿಯ ವಸ್ತುಗಳನ್ನು ಪತ್ತೆ ಮಾಡಲಾಗಿದೆ.
ರೈಲ್ವೆಯ ವರದಿಯ ಪ್ರಕಾರ, 18 ಘಟನೆಗಳಲ್ಲಿ 15 ಆಗಸ್ಟ್ ನಲ್ಲಿ ಮತ್ತು ಮೂರು ಸೆಪ್ಟೆಂಬರ್ ನಲ್ಲಿ ಸಂಭವಿಸಿವೆ. ಘಟನೆಗಳಲ್ಲಿ ಹೆಚ್ಚಿನವು ಉತ್ತರ ಪ್ರದೇಶದಲ್ಲಿ ನಡೆದಿದ್ದು, ಉಳಿದವು ಪಂಜಾಬ್, ಜಾರ್ಖಂಡ್, ರಾಜಸ್ಥಾನ, ಮಧ್ಯಪ್ರದೇಶ, ಒಡಿಶಾ ಮತ್ತು ತೆಲಂಗಾಣದಿಂದ ವರದಿಯಾಗಿದೆ.
ಕಳೆದ ಆಗಸ್ಟ್ನಲ್ಲಿ ಅಹಮದಾಬಾದ್ ಗೆ ತೆರಳುತ್ತಿದ್ದ ಸಬರಮತಿ ಎಕ್ಸ್ ಪ್ರೆಸ್ ಪ್ಯಾಸೆಂಜರ್ ರೈಲಿನ 20 ಬೋಗಿಗಳು ಕಾನ್ಪುರದ ಗೋವಿಂದಪುರಿ ನಿಲ್ದಾಣದ ಬಳಿ ಹಳಿತಪ್ಪಿದವು. ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಈ ಭಾನುವಾರ ಎರಡು ಹಳಿ ತಪ್ಪಿಸುವ ಪ್ರಯತ್ನಗಳು ನಡೆದಿವೆ. ಕಾನ್ಪುರದಲ್ಲಿ ಕಾಳಿಂದಿ ಎಕ್ಸ್ಪ್ರೆಸ್ ಪ್ಯಾಸೆಂಜರ್ ರೈಲು ಹಳಿ ಮೇಲೆ ಇರಿಸಲಾಗಿದ್ದ ಎಲ್ ಪಿಜಿ ಸಿಲಿಂಡರ್ಗೆ ಡಿಕ್ಕಿ ಹೊಡೆದು ನಿಂತಿತು.
ಟ್ರ್ಯಾಕ್ ನಲ್ಲಿ ಸಿಲಿಂಡರ್, ಪೆಟ್ರೋಲ್ ಬಾಟಲಿ, ಬೆಂಕಿಕಡ್ಡಿ ಸೇರಿದಂತೆ ಇತರ ಅನುಮಾನಾಸ್ಪದ ವಸ್ತುಗಳನ್ನು ಗುರುತಿಸಿದ ನಂತರ ಲೊಕೋ ಪೈಲಟ್ ಬ್ರೇಕ್ ಹಾಕಿದ್ದರು. ಕಾನ್ಪುರ ಪೊಲೀಸರು ಎಫ್ ಐಆರ್ ದಾಖಲಿಸಿದ್ದು, ಈವರೆಗೆ ಆರು ಮಂದಿಯನ್ನು ಬಂಧಿಸಿದ್ದಾರೆ.
ಪ್ರತ್ಯೇಕ ಘಟನೆಯಲ್ಲಿ ರಾಜಸ್ಥಾನದ ಅಜ್ಮೀರ್ ನಲ್ಲಿ ಸರಕು ರೈಲು ಸಂಚರಿಸುತ್ತಿದ್ದು, ಹಳಿಗಳ ಮೇಲೆ ತಲಾ 70 ಕೆಜಿ ತೂಕದ ಎರಡು ಸಿಮೆಂಟ್ ಬ್ಲಾಕ್ ಗಳನ್ನು ಇರಿಸಲಾಗಿತ್ತು. ಇದಕ್ಕೆ ಡಿಕ್ಕಿ ಹೊಡೆದ ನಂತರ ರೈಲು ಯಾವುದೇ ಹಾನಿಯಾಗದೆ ತನ್ನ ಪ್ರಯಾಣವನ್ನು ಮುಂದುವರಿಸಿದೆ. ಸೆಪ್ಟೆಂಬರ್ 4 ರಂದು ಇದೇ ರೀತಿಯ ಘಟನೆಯಲ್ಲಿ, ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯಲ್ಲಿ ರೈಲು ಹಳಿ ಮೇಲೆ ಬೃಹತ್ ಕಲ್ಲನ್ನು ಹಾಕಿರುವುದನ್ನು ಟವರ್ ವ್ಯಾಗನ್ ನ ಲೋಕೋ ಪೈಲಟ್ ಗಳು ಗಮನಿಸಿದರು ಮತ್ತು ಅದಕ್ಕೆ ಡಿಕ್ಕಿಯಾಗುವ ಮೊದಲೇ ರೈಲು ನಿಲ್ಲಿಸಿದರು. ಘಟನೆ ಕುರಿತು ರೈಲ್ವೆ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದು, ಘಟನೆಯ ಬಗ್ಗೆ ತನಿಖೆ ಆರಂಭಿಸಲಾಗಿದೆ.