ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ, ಡಿಎಂಕೆ ಮುಖ್ಯಸ್ಥ ಎಮ್.ಕೆ. ಸ್ಟಾಲಿನ್ ಅವರ ಆತ್ಮಕಥೆ ‘ಉಂಗಲಿಲ್ ಒರುವನ್’ ಸೋಮವಾರ ಬಿಡುಗಡೆಗೊಳಿಸಲಾಯಿತು. ಚೆನ್ನೈ ಟ್ರೇಡ್ ಸೆಂಟರ್ ನಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಈ ಪುಸ್ತಕವನ್ನು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಆರ್.ಜೆ.ಡಿ. ಮುಖ್ಯಸ್ಥ ತೇಜಸ್ವಿ ಯಾದವ್, ಜಮ್ಮು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು. ಮುಖ್ಯಮಂತ್ರಿ ಸ್ಟಾಲಿನ್ ಅವರನ್ನು 1976ರಲ್ಲಿ ಬಂಧಿಸುವವರೆಗೆ ಅವರ ಜೀವನದ ಮೊದಲ ಅಮೂಲ್ಯ 23 ವರ್ಷಗಳ ಬಗ್ಗೆ ಈ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.
ಕಾರ್ಯಕ್ರಮದ ಅತಿಥಿಗಳನ್ನು ಸ್ವಾಗತಿಸುತ್ತಾ ಮಾತನಾಡಿದ ಡಿಎಂಕೆ ಹಿರಿಯ ನಾಯಕಿ ಸಂಸದೆ ಕನಿಮೊಳಿ ಅವರು, ಇದು ಕೇವಲ ಪುಸ್ತಕದ ಬಿಡುಗಡೆ ಮಾತ್ರವಲ್ಲ, ಬಲಪಂಥೀಯ ರಾಜಕೀಯ ಪಕ್ಷ ಮತ್ತು ಫ್ಯಾಶಿಸ್ಟ್ ವಿರುದ್ಧದ ಹೋರಾಟಗಾರರಿಗೆ ಕೇವಲ ಟ್ರೇಲರ್ ಎಂದು ತಿಳಿಸಿದ್ದಾರೆ. ಸದ್ಯ ನ್ಯಾಯಾಂಗ, ಚುನಾವಣಾ ಆಯೋಗ, ಮಾಧ್ಯಮಗಳ ಮೇಲೆ ವ್ಯವಸ್ಥಿತವಾದ ದಾಳಿ ನಡೆಯುತ್ತಿದೆ.
ಭಾರತದ ಇತಿಹಾಸ, ಸಂಪ್ರದಾಯ ಮತ್ತು ಪರಂಪರೆಯ ವಿರುದ್ಧ ಬಿಜೆಪಿ ಕಾರ್ಯನಿರ್ವಹಿಸುತ್ತಿದೆ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಸಂಘಟಿತ ಹೋರಾಟದ ಮೂಲಕ ಬಿಜೆಪಿಯನ್ನು ಸೋಲಿಸಲಾಗುವುದೆಂದು ರಾಹುಲ್ ಗಾಂಧಿ ತಿಳಿಸಿದ್ದಾರೆ. ಪ್ರಸಕ್ತ ಭಾರತದಲ್ಲಿ ಬಿಜೆಪಿಯ ನಾಗಾಲೋಟವನ್ನು ತಡೆಯುವ ನಿಟ್ಟಿನಲ್ಲಿ ಸಮಾನ ಮನಸ್ಕರು ಒಗ್ಗೂಡಬೇಕಾದ ಅಗತ್ಯತೆಯಿದೆ.
ಪ್ರಸಕ್ತ ಹೋರಾಟ ಯಾವುದೇ ಒಂದು ಪಕ್ಷದ ವಿರುದ್ಧದ ಹೋರಾಟವಲ್ಲ. ಇಡೀ ಕಳಪೆ ಆಡಳಿತ ಯಂತ್ರದ ವಿರುದ್ಧದ ಸಂಘಟಿತವಾದ ಹೋರಾಟ ಎಂದು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ತಿಳಿಸಿದ್ದಾರೆ.
ರಾಷ್ಟ್ರದ ಹಕ್ಕುಗಳಿಗೆ ಯಾವುದೇ ಧಕ್ಕೆಯಾದಾಗ ತಮ್ಮ ತಮಿಳುನಾಡಿನ ಪ್ರತಿರೂಪವು ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದೆ ಎಂದು ಸಭೆಯನ್ನುದ್ದೇಶಿಸಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ಈ ಮಧ್ಯೆ ಸಭೆಯನ್ನುದ್ದೇಶಿಸಿ ಮಾತನಾಡಿದ ಆರ್.ಜೆ.ಡಿ. ಮುಖಂಡ ತೇಜಸ್ವಿ ಯಾದವ್, ರಾಷ್ಟ್ರವ್ಯಾಪ್ತಿ ಜಾತಿ ಆಧಾರಿತ ಜನಗಣತಿ ಮತ್ತು ಭಾರತದ ನ್ಯಾಯಾಂಗದಲ್ಲಿ ವೈವಿಧ್ಯತೆಯಲ್ಲಿನ ಕೊರತೆಯ ಬಗ್ಗೆ ಮಾತನಾಡಿದರು.