ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಭರ್ಜರಿ ಗೆಲುವು ಸಾಧಿಸಿದ್ದಾರೆ. ಅವರ ಗೆಲುವಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿಶ್ವದಾದ್ಯಂತದ ನಾಯಕರು ಅಭಿನಂದನೆ ಸಲ್ಲಿಸಿದ್ದಾರೆ.
ಇದೀಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ರಂಪ್ ಗೆಲುವಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಇದರೊಂದಿಗೆ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋಲು ಕಂಡಿರುವ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರಿಗೆ ಪತ್ರ ಬರೆದಿದ್ದಾರೆ.
ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದ ನಿಮಗೆ ಅಭಿನಂದನೆಗಳು. ಅಮೆರಿಕಾದ ಜನರು ನಿಮ್ಮ ಮೇಲೆ ನಂಬಿಕೆ ಇರಿಸಿದ್ದಾರೆ. ಭಾರತ ಮತ್ತು ಅಮೆರಿಕ ಪ್ರಜಾಪ್ರಭುತ್ವ ಮೌಲ್ಯಗಳ ಮೇಲೆ ಬದ್ದತೆ ಇಟ್ಟುಕೊಂಡಿರುವ ದೇಶಗಳು. ನಮ್ಮ ರಾಷ್ಟ್ರಗಳು ಪರಸ್ಪರ ಹಿತಾಸಕ್ತಿಯ ಕ್ಷೇತ್ರಗಳಲ್ಲಿ ಸಹಕಾರವನ್ನು ಇನ್ನಷ್ಟು ಆಳಗೊಳಿಸುತ್ತವೆ ಎಂಬ ವಿಶ್ವಾಸ ನಮಗಿದೆ. ಭಾರತೀಯರು ಮತ್ತು ಅಮೆರಿಕನ್ನರಿಬ್ಬರಿಗೂ ಮಾರ್ಗಗಳು ಮತ್ತು ಅವಕಾಶಗಳನ್ನು ವಿಸ್ತರಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ ಎಂದು ನಾನು ಭಾವಿಸುತ್ತೇನೆ ಎಂದು ಟ್ರಂಪ್ಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋತ ಕಮಲಾ ಹ್ಯಾರಿಸ್ಗೂ ಪತ್ರ ಬರೆದಿದ್ದು, ನಿಮ್ಮ ಉತ್ಸಾಹಭರಿತ ಅಧ್ಯಕ್ಷೀಯ ಪ್ರಚಾರಕ್ಕಾಗಿ ನಾನು ನಿಮ್ಮನ್ನು ಅಭಿನಂದಿಸಲು ಬಯಸುತ್ತೇನೆ. ನಿಮ್ಮ ಒಗ್ಗೂಡಿಸುವ ಭರವಸೆಯ ಸಂದೇಶವು ಅನೇಕರನ್ನು ಪ್ರೇರೇಪಿಸುತ್ತದೆ. ಜೋ ಬೈಡೆನ್ ಆಡಳಿತದಲ್ಲಿ ಭಾರತ ಮತ್ತು ಅಮೆರಿಕ ಜಾಗತಿಕ ಪ್ರಾಮುಖ್ಯತೆಯ ವಿಷಯಗಳ ಬಗ್ಗೆ ಆಳವಾದ ಸಹಕಾರವನ್ನು ಹೊಂದಿವೆ. ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ನಮ್ಮ ಹಂಚಿಕೆಯ ಬದ್ಧತೆಯು ನಮ್ಮ ಸ್ನೇಹಕ್ಕೆ ಮಾರ್ಗದರ್ಶನ ನೀಡುವುದನ್ನು ಮುಂದುವರಿಸುತ್ತದೆ ಎಂದು ಧೈರ್ಯ ತುಂಬಿದ್ದಾರೆ.
ಉಪಾಧ್ಯಕ್ಷರಾಗಿ ಜನರನ್ನು ಒಟ್ಟುಗೂಡಿಸುವ ಮತ್ತು ಸಾಮಾನ್ಯ ನೆಲೆಯನ್ನು ಕಂಡುಕೊಳ್ಳುವ ನಿಮ್ಮ ಸಂಕಲ್ಪವನ್ನು ನೆನಪಿಸಿಕೊಳ್ಳಲಾಗುತ್ತದೆ. ನಿಮ್ಮ ಮುಂದಿನ ಪ್ರಯತ್ನಗಳಲ್ಲಿ ನಾನು ನಿಮಗೆ ಶುಭ ಹಾರೈಸುತ್ತೇನೆ ಎಂದಿದ್ದಾರೆ.