ಭಾರತ್ ಜೋಡೋ ಯಾತ್ರೆಯಲ್ಲಿ ದುಬಾರಿ ಟಿ-ಶರ್ಟ್ ಧರಿಸಿದ ರಾಹುಲ್ ಗಾಂಧಿ: ಬಿಜೆಪಿಯ ಟೀಕೆಗೆ ತಿರುಗೇಟು ನೀಡಿದ ಕಾಂಗ್ರೆಸ್

Prasthutha|

ನವದೆಹಲಿ: ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡ ರಾಹುಲ್ ಗಾಂಧಿ ಅವರು ದುಬಾರಿ 41 ಸಾವಿರ ರೂ.ಬೆಲೆಯ ಟಿ-ಶರ್ಟ್ ಧರಿಸಿರುವುದು ಹಲವರ ಆಕ್ರೋಶಕ್ಕೆ ಗುರಿಯಾಗಿದ್ದು, ಬಿಜೆಪಿಯ ಟೀಕೆಗೆ ಕಾಂಗ್ರೆಸ್ ಪಕ್ಷ ತೀಕ್ಷ್ಣವಾಗಿ ತಿರುಗೇಟು ನೀಡಿದೆ.

- Advertisement -

ಭಾರತ್ ಜೋಡೋ ಯಾತ್ರೆಯಲ್ಲಿ 41 ಸಾವಿರ ಬೆಲೆಯ ಟಿ-ಶರ್ಟ್ ಧರಿಸಿದ್ದನ್ನೇ ನೆಪವಾಗಿಟ್ಟ ಬಿಜೆಪಿ, ರಾಹುಲ್ ಗಾಂಧಿ ಅವರ ಕಾಲೆಳೆದಿತ್ತು. ಟ್ವೀಟ್’ನಲ್ಲಿ ರಾಹುಲ್ ಗಾಂಧಿ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದ ಬಿಜೆಪಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಕಾಂಗ್ರೆಸ್, ಪ್ರಧಾನಿ ನರೇಂದ್ರ ಮೋದಿ ಅವರು ಧರಿಸಿದ 10 ಲಕ್ಷ ರೂ. ಬೆಲೆಯ ಸೂಟ್ ಕುರಿತು ಮಾತನಾಡಿ ಎಂದು ತಿರುಗೇಟು ನೀಡಿದೆ.

ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಿರುವ ಜನರನ್ನು ಕಂಡು ಬಿಜೆಪಿಗೆ ನಡುಕ ಶುರುವಾಗಿದೆಯೇ ಎಂದು ಪ್ರಶ್ನಿಸಿದ ಕಾಂಗ್ರೆಸ್, ರಾಹುಲ್ ಗಾಂಧಿ ಅವರ ಟಿ-ಶರ್ಟ್ ಕುರಿತು ಬಿಜೆಪಿಗರು ಮೋದಿಯ 10 ಲಕ್ಷದ ಸೂಟ್ ಮತ್ತು 1.5 ಲಕ್ಷದ ಕನ್ನಡಕದ ಕುರಿತು ಮಾತನಾಡಿ ಎಂದು ಸವಾಲು ಹಾಕಿದೆ.

- Advertisement -

ಇತ್ತೀಚೆಗೆ ಕಾಂಗ್ರೆಸ್ ಆರಂಭಿಸಿದ ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಅವರು ಬಿಳಿ ಬಣ್ಣದ ಬುರ್ಬೆರಿ ಟಿ-ಶರ್ಟ್ ಧರಿಸಿ ಗಮನ ಸೆಳೆದಿದ್ದರು. ಈ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿದ ಬಿಜೆಪಿ, ಭಾರತ್ ದೇಖೋ ಎಂಬ ಶೀರ್ಷಿಕೆ ಅಡಿಯಲ್ಲಿ ದುಬಾರಿ ಟಿ-ಶರ್ಟ್’ನ ಬೆಲೆಯನ್ನು ನಮೂದಿಸಿ ಪೋಸ್ಟ್ ಅನ್ನು ಮಾಡಿ ರಾಹುಲ್ ಗಾಂಧಿ ಅವರ ಕಾಲೆಳೆದಿತ್ತು.

Join Whatsapp