ಚೆನ್ನೈ : ತಮಿಳುನಾಡಿನ ಪ್ರಸಿದ್ಧ ಯೂಟ್ಯೂಬ್ ಚಾನೆಲ್ ‘ವಿಲೇಜ್ ಕುಕ್ಕಿಂಗ್’ನ ಅಡುಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗಮನ ಸೆಳೆದಿದ್ದಾರೆ. ಕಾಡುಮೇಡು, ಹಳ್ಳಿಗಾಡಿನಲ್ಲಿ ಅಡುಗೆ ಮಾಡಿ ತೋರಿಸುವ ಈ ಚಾನೆಲ್ ನ ತಂಡ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದೆ. ಈ ಚಾನೆಲ್ ಈ ಬಾರಿಯ ವಿಶೇಷ ಅತಿಥಿಯಾಗಿ ರಾಹುಲ್ ಗಾಂಧಿ ಭಾಗವಹಿಸಿ, ತಂಡ ಸಿದ್ಧಪಡಿಸಿದ ಮಶ್ರೂಮ್(ಅಣಬೆ) ಬಿರ್ಯಾನಿ ಸವಿದು ಸಂಭ್ರಮಿಸಿದರು.
ಅಡುಗೆ ಸಿದ್ಧಪಡಿಸುವಲ್ಲಿ ರಾಹುಲ್ ಗಾಂಧಿ ಕೂಡ ಸಹಕರಿಸಿದ್ದು, ಈ ಕುರಿತ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನೀಲಿ ಬಣ್ಣದ ಟೀ ಶರ್ಟ್ ಧರಿಸಿದ್ದ ರಾಹುಲ್ ಗಾಂಧಿ ಅಡುಗೆ ಮಾಡುವ ನಡುವೆ, ಊಟದ ನಡುವೆ ತಮಿಳು ಮಾತನಾಡುವುದನ್ನು ಕಾಣಬಹುದಾಗಿದೆ.
ಕಲ್ಲುಪ್ಪು, ಥಾಯಿರ್, ನಲ್ಲ ಇರುಕು ಹೀಗೆ ಸಾಕಷ್ಟು ಪದಗಳನ್ನು ರಾಹುಲ್ ಗಾಂಧಿ ಬಳಕೆ ಮಾಡಿದ್ದಾರೆ.
ತಂಡವು ಸಿದ್ಧಪಡಿಸಿದ್ದ ಮಶ್ರೂಮ್ ಬಿರ್ಯಾನಿ ಯನ್ನು ಚಾಪೆ ಮೇಲೆ ಕುಳಿತು ಸವಿದಿದ್ದಾರೆ. ಬಿರ್ಯಾನಿಗೆ ರಾಯತ ತಯಾರು ಮಾಡಿದ್ದು ಸ್ವತಃ ರಾಹುಲ್ ಗಾಂಧಿ. ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಈ ವೇಳೆ ಜೊತೆಗಿದ್ದರು.