ಕಲಬುರಗಿ: ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾನು ನಾಮಪತ್ರ ಸಲ್ಲಿಸಿಲ್ಲ, ಸಲ್ಲಿಸುವುದೂ ಇಲ್ಲ. ಪಕ್ಷದ ನಾಯಕ ರಾಹುಲ್ ಗಾಂಧಿ ಅವರೇ ಮತ್ತೊಮ್ಮೆ ಅಧ್ಯಕ್ಷರಾಗಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಕಲಬುರಗಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಗಾಂಧಿ ಕುಟುಂಬದವರು ಯಾರು ವಹಿಸಿಕೊಳ್ಳಲ್ಲ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ. ಆದರೆ ನಾನು ಎಐಸಿಸಿ ಅಧ್ಯಕ್ಷ ಸ್ಥಾನದ ಅಕಾಂಕ್ಷಿ ಅಲ್ಲ ಎಂದರು.
ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ನಾನು ಭೇಟಿ ಮಾಡಿದ ಸಂದರ್ಭದಲ್ಲಿ ಅವರು ನಾವ್ಯಾರೂ ಅಧ್ಯಕ್ಷರಾಗುವುದಿಲ್ಲ ಎಂದಿದ್ದರು. ಆದರೆ ದೇಶದ ಹಿತದೃಷ್ಟಿಯಿಂದ ರಾಹುಲ್ ಗಾಂಧಿ ಅವರೇ ಅದ್ಯಕ್ಷರಾಗಬೇಕು. ಇನ್ಮೊಮ್ಮೆ ಅವರ ಮನವೊಲಿಸಲು ಪ್ರಯತ್ನಿಸುವೆ. ಹಾಗಾಗಿ, ನಾನು ಸ್ಪರ್ಧಿಸುವ ಪ್ರಶ್ನೆಯೇ ಬರುವುದಿಲ್ಲ. ಪಕ್ಷ ಕೊಟ್ಟ ಯಾವುದೇ ಜವಾಬ್ದಾರಿಯನ್ನು ನಿರ್ವಹಿಸುತ್ತೇನೆ’ ಎಂದು ಸ್ಪಷ್ಟಪಡಿಸಿದರು.
ಮಾಜಿ ಸಚಿವರಾದ ಶರಣಬಸಪ್ಪ ದರ್ಶನಾಪುರ, ಡಾ.ಶರಣಪ್ರಕಾಶ ಪಾಟೀಲ್, ಮಾಜಿ ಶಾಸಕ ತಿಪ್ಪಣ್ಣಪ್ಪ ಕಮಕನೂರ, ಮುಖಂಡರಾದ ಡಾ.ಎಸ್.ಬಿ.ಕಾಮರಡ್ಡಿ, ನೀಲಕಂಠ ಮೂಲಗೆ, ಸೋಮಶೇಖರ್ ಗೋನಾಯಕ, ಮಹಾಂತಪ್ಪ ಸಂಗಾವಿ ಇದ್ದರು.