ರಾಹುಲ್ ಗಾಂಧಿ ಭದ್ರತಾ ನಿಯಮಾವಳಿ ಪಾಲಿಸುತ್ತಿಲ್ಲ: ದಿಲ್ಲಿ ಪೊಲೀಸರ ಕ್ಯಾತೆ

Prasthutha|

ನವದೆಹಲಿ: ಸದ್ಯಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ನಾಯಕತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ದಿಲ್ಲಿಯಲ್ಲಿ ಹೊಸ ವರ್ಷದ ವಿಶ್ರಾಂತಿಯಲ್ಲಿದೆ. ಆದರೆ ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿಯವರ ತಂಡವು ಕೊರೋನಾ ನಿಯಮಾವಳಿಗಳನ್ನು ಪಾಲಿಸುತ್ತಿಲ್ಲ ಎಂದು ದೆಹಲಿ ಪೊಲೀಸರು ಕ್ಯಾತೆ ತೆಗೆದಿದ್ದಾರೆ.

- Advertisement -

ಇದರ ನಡುವೆ ಸಿಆರ್’ಪಿಎಫ್’ನವರು ರಾಹುಲ್ ಗಾಂಧಿಯವರು ಹಲವಾರು ಬಾರಿ ಸುರಕ್ಷತಾ ನಿಯಮಾವಳಿ ಮೀರಿದ್ದಾರೆ ಎಂದು ದೂರಿದ್ದಾರೆ. ಭಾರತ್ ಜೋಡೋ ಯಾತ್ರೆಗೆ ಮತ್ತು ರಾಹುಲ್ ಗಾಂಧಿಯವರಿಗೆ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಆದರೆ ಅವರು ಯಾವುದೇ ಭದ್ರತಾ ನಿಯಮಾವಳಿ ಪಾಲಿಸುತ್ತಿಲ್ಲ ಎಂದು ಸಿಆರ್’ಪಿಎಫ್’ನವರ ಜೊತೆಗೆ ದಿಲ್ಲಿ ಪೊಲೀಸರು ಸಹ ಹೇಳಿದ್ದಾರೆ.

ಈ ಸಂಬಂಧ ದಿಲ್ಲಿ ಪೊಲೀಸರು ಗೃಹ ಮಂತ್ರಾಲಯಕ್ಕೆ ತಮ್ಮ ವರದಿ ಸಲ್ಲಿಸಿದ್ದಾರೆ. ದಿಲ್ಲಿ ಪೊಲೀಸ್ ನೇರ ಕೇಂದ್ರ ಸರಕಾರದ ಗೃಹ ಸಚಿವಾಲಯದ ಅಡಿ ಬರುತ್ತದೆ.

- Advertisement -

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ಅವರು ಗೃಹ ಮಂತ್ರಿ ಅಮಿತ್ ಶಾರಿಗೆ ಈ ಬಗ್ಗೆ ಪತ್ರ ಬರೆದು, ದಿಲ್ಲಿ ಪ್ರವೇಶಿಸುವಾಗ ಭಾರತ್ ಜೋಡೋ ಯಾತ್ರೆಯು ಕೆಲವು ಭದ್ರತಾ ಹೊಂದಾಣಿಕೆಗಳನ್ನು ಮಾಡಿಕೊಂಡಿತ್ತು ಎಂದು ತಿಳಿಸಿದ್ದರು. ಅದರೆ ಬೆನ್ನಿಗೆ ಗೃಹ ಮಂತ್ರಾಲಯವು ದಿಲ್ಲಿ ಪೊಲೀಸರಿಂದ ಈ ಬಗ್ಗೆ ವರದಿ ಕೇಳಿತ್ತು.

ಭದ್ರತಾ ಸಿಬ್ಬಂದಿ, ಸಂಚಾರ ನಿಯಂತ್ರಣ, ದಿಲ್ಲಿ ಪೊಲೀಸರ ವಿಶೇಷ ವಿಭಾಗ ಎಲ್ಲರೂ ಗೃಹ ಮಂತ್ರಾಲಯಕ್ಕೆ ವರದಿ ಸಲ್ಲಿಸಿದ್ದಾರೆ.

ದಿಲ್ಲಿ ಪೊಲೀಸರು ಹಲವರನ್ನು ಸಾಮಾನ್ಯ ಉಡುಗೆಯಲ್ಲಿ ನಿಲ್ಲಿಸಿ ರಾಹುಲ್’ಗೆ ಭದ್ರತೆ ಒದಗಿಸಿದ್ದಾಗಿಯೂ ಹೇಳಿಕೊಂಡಿದ್ದಾರೆ.

ರಾಹುಲ್ ಗಾಂಧಿಯವರು ತಾವಾಗಿಯೇ ಭದ್ರತಾ ವ್ಯವಸ್ಥೆ ಮುರಿದಿದ್ದಾರೆ ಎಂದು ದಿಲ್ಲಿ ಪೊಲೀಸರು ಆರೋಪ ಮಾಡಿದ್ದಾರೆ. ಸಿಆರ್’ಪಿಎಫ್ ಸಹ ನಮಗೆ ಕಾರ್ಯ ನಿರ್ವಹಿಸಲು ಕಷ್ಟವಾಗುವಂತೆ ರಾಹುಲ್ ಗಾಂಧಿ ಭದ್ರತಾ ನಿಯಮ ಮೀರಿದ್ದರು ಎಂದು ಹೇಳಿದ್ದಾರೆ.

ಭಾರತ್ ಜೋಡೋ ಯಾತ್ರೆಯು ಮುಂದೆ ಸೂಕ್ಷ್ಮ ಪ್ರದೇಶಗಳಾದ ಪಂಜಾಬ್ ಮತ್ತು ಜಮ್ಮ ಕಾಶ್ಮೀರ ಪ್ರವೇಶಿಸುತ್ತಿದೆ. ಜೆಡ್+ ಭದ್ರತೆ ಪಡೆದಿರುವ ರಾಹುಲ್ ಗಾಂಧಿಯವರಿಗೆ ಮುಂದಿನ ಸೂಕ್ಷ್ಮ ಪ್ರದೇಶಗಳಲ್ಲಿ ಅತಿ ಎಚ್ಚರದ ಭದ್ರತಾ ವ್ಯವಸ್ಥೆ ನೀಡಬೇಕು ಎಂದು ಕಾಂಗ್ರೆಸ್  ಆಗ್ರಹಿಸಿದೆ.

“ಭದ್ರತೆ ಪಡೆಯುವವರೇ ಭದ್ರತಾ ವ್ಯವಸ್ಥೆ ನಿಯಮಾವಳಿ ಪಾಲಿಸದಿದ್ದರೆ ನಾವು ಭದ್ರತೆ ಸೂಕ್ತವಾಗಿ ಒದಗಿಸುವುದಾದರೂ ಹೇಗೆ? ರಾಹುಲ್ ಗಾಂಧಿಯವರು ಹಲವು ಬಾರಿ ನಿಯಮಾವಳಿ ಮುರಿದಾಗಲೆಲ್ಲ ಅದನ್ನು ಅವರ ಗಮನಕ್ಕೆ ತರಲಾಗಿದೆ. ರಾಹುಲ್ ಗಾಂಧಿಯವರು 113 ಬಾರಿ ಭದ್ರತಾ ನಿಯಮಾವಳಿ ಮೀರಿದ್ದಾರೆ” ಎಂದು ಸಿಆರ್’ಪಿಎಫ್ ನವರು ವರದಿಯಲ್ಲಿ ಹೇಳಿದ್ದಾರೆ.

Join Whatsapp