ನವದೆಹಲಿ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದಿದ್ದಾರೆ. ಹತ್ರಾಸ್ನಲ್ಲಿ ಕಾಲ್ತುಳಿತದಲ್ಲಿ ಮೃತಪಟ್ಟ ಸಂತ್ರಸ್ತರಿಗೆ ಪರಿಹಾರ ಮೊತ್ತವನ್ನು ಹೆಚ್ಚಿಸುವಂತೆ ಪತ್ರದಲ್ಲಿ ಮನವಿ ಮಾಡಿದ್ದಾರೆ.
ಉತ್ತರಪ್ರದೇಶ ಸರ್ಕಾರ ಘೋಷಿಸಿರುವ ಪರಿಹಾರ ತೀರಾ ಅಸಮರ್ಪಕವಾಗಿದೆ. ಪರಿಹಾರದ ಮೊತ್ತವನ್ನು ಹೆಚ್ಚಿಸಬೇಕು ಹಾಗೂ ಅದನ್ನು ಆದಷ್ಟು ಬೇಗ ಅವರಿಗೆ ತಲುಪುವಂತೆ ಮಾಡಬೇಕು. ಮತ್ತು ಗಾಯಾಳುಗಳಿಗೆ ತಕ್ಷಣ ಸೂಕ್ತ ಚಿಕಿತ್ಸೆ ಸಿಗುವಂತೆ ನೋಡಿಕೊಳ್ಳಬೇಕು ಎಂದು ಪತ್ರದಲ್ಲಿ ಗಾಂಧಿ ಉಲ್ಲೇಖಿಸಿದ್ದಾರೆ. ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಮತ್ತು ನ್ಯಾಯ ವ್ಯವಸ್ಥೆಯಲ್ಲಿ ಈ ಸಂತ್ರಸ್ತ ಕುಟುಂಬಗಳ ನಂಬಿಕೆಯನ್ನು ಉಳಿಸಿಕೊಳ್ಳಲು ಸರಿಯಾದ ತನಿಖೆ ಅಗತ್ಯ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡುವುದು ಸೂಕ್ತ ಎಂದು ವಿರೋಧ ಪಕ್ಷದ ನಾಯಕ ತಿಳಿಸಿದ್ದಾರೆ.
ಸ್ವಯಂಘೋಷಿತ ಭೋಲೆಬಾಬಾ ಎಂಬಾತನ ಸತ್ಸಂಗ ಎಂಬ ಕಾರ್ಯಕ್ರಮದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಒಟ್ಟು 121 ಮಂದಿ ಮೃತಪಟ್ಟಿದ್ದರು ಮತ್ತು ಹಲವರಿಗೆ ಗಂಭೀರ ಗಾಯಗಳಾಗಿವೆ. ಮುಖ್ಯಮಂತ್ರಿ ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಮತ್ತು ಗಾಯಗೊಂಡವರಿಗೆ 50 ಸಾವಿರ ರೂ. ಪರಿಹಾರ ಘೋಷಿಸಿದ್ದರು.