ತಂದೆಯ ಹಂತಕರನ್ನು ಕ್ಷಮಿಸಿದ್ದೇನೆ, ದ್ವೇಷವಿಲ್ಲ : ರಾಹುಲ್ ಗಾಂಧಿ

Prasthutha|

ಪುದುಚೇರಿ : ತಮ್ಮ ತಂದೆಯನ್ನು ಹತ್ಯೆ ಮಾಡಿದ್ದು ನೆನಪಿಸಿಕೊಂಡಾಗ ಸಾಕಷ್ಟು ನೋವಾಗುತ್ತದೆ, ಆದರೆ ಹತ್ಯೆ ಮಾಡಿದವರ ಮೇಲೆ ಸಿಟ್ಟಿಲ್ಲ, ತಂದೆಯನ್ನು ಹತ್ಯೆ ಮಾಡಿದವರನ್ನು ಕ್ಷಮಿಸಿದ್ದೇನೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

- Advertisement -

ಪುದುಚೇರಿಯ ಭಾರತೀದಾಸನ್ ಸರಕಾರಿ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರ ಜೊತೆ ನಿನ್ನೆ ಸಂವಾದ ನಡೆಸಿದ ಅವರು ಸಾಕಷ್ಟು ವಿಚಾರಗಳನ್ನು ಇಂದಿನ ಯುವಜನತೆಯೊಂದಿಗೆ ಹಂಚಿಕೊಂಡರು.

ಮುಂದಿನ ಮೇ ತಿಂಗಳಲ್ಲಿ ಪುದುಚೇರಿಯಲ್ಲಿ ಚುನಾವಣೆ ನಡೆಯಲಿದ್ದು, ಅದಕ್ಕೂ ಮುನ್ನ ನಿನ್ನೆ ಅವರು ಪ್ರಚಾರದಲ್ಲಿ ಭಾಗಿಯಾದರು. ಕಾಲೇಜಿನ ವಿದ್ಯಾರ್ಥಿನಿಯರು ಹಲವು ಪ್ರಶ್ನೆಗಳನ್ನು ರಾಹುಲ್ ಗಾಂಧಿಯವರಲ್ಲಿ ಕೇಳಿದರು.

- Advertisement -

ನಿಮ್ಮ ತಂದೆಯವರ ಹತ್ಯೆಯ ಬಗ್ಗೆ ಏನು ಹೇಳುತ್ತೀರಿ, ನಿಮಗೆ ಏನು ಅನಿಸುತ್ತದೆ? ಎಂದು 21 ವರ್ಷದ ವಿದ್ಯಾರ್ಥಿನಿಯೊಬ್ಬಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾಹುಲ್ ಗಾಂಧಿ, ನನಗೆ ಯಾರ ಮೇಲೂ ದ್ವೇಷವಾಗಲೀ, ಸಿಟ್ಟಾಗಲೀ ಇಲ್ಲ. ಖಂಡಿತಾ ನಾನು ನನ್ನ ತಂದೆಯನ್ನು ಕಳೆದುಕೊಂಡಿದ್ದೇನೆ, ನಮ್ಮ ತಂದೆಯನ್ನು ಕಳೆದುಕೊಂಡ ಸಂದರ್ಭ ನಮಗೆ ಬಹಳ ಕಷ್ಟದ ದಿನಗಳಾಗಿದ್ದವು. ಅದನ್ನು ನೆನಪಿಸಿಕೊಂಡಾಗ ಸಾಕಷ್ಟು ನೋವಾಗುತ್ತದೆ. ಹಾಗೆಂದು ಹತ್ಯೆ ಮಾಡಿದವರ ಮೇಲೆ ದ್ವೇಷ, ಸಿಟ್ಟು ಇಲ್ಲ. ನಾನು ಅವರನ್ನು ಕ್ಷಮಿಸಿದ್ದೇನೆ ಎಂದರು.

ಹಿಂಸೆಯಿಂದ ನೀವು ಏನನ್ನೂ ಸಾಧಿಸಲು ಸಾಧ್ಯವಿಲ್ಲ. ನನ್ನ ತಂದೆ ನನ್ನಲ್ಲಿ ಜೀವಂತವಾಗಿದ್ದಾರೆ. ನನ್ನ ಮೂಲಕ ನನ್ನ ತಂದೆ ಇಂದು ಮಾತನಾಡುತ್ತಿದ್ದಾರೆ ಎಂದು ಅವರು ಹೇಳಿದರು.

ಸಂವಾದದ ಬಳಿಕ, ವಿದ್ಯಾರ್ಥಿನಿಯೊಬ್ಬಳು ರಾಹುಲ್ ಗಾಂಧಿ ಅವರ ಆಟೊಗ್ರಾಫ್ ಪಡೆಯುತ್ತಿದ್ದಾಗ ಭಾವಪರವಶಳಾಗಿ, ಕುಣಿಯುತ್ತಾ, ಆನಂದ ಭಾಷ್ಪ ಸುರಿಸಿದ ವೀಡಿಯೊವೊಂದು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ರಾಹುಲ್ ಗಾಂಧಿ ವೇದಿಕೆಯಲ್ಲಿ ನಿಂತಿದ್ದಾಗ ಅವರ ಬಳಿಗೆ ತೆರಳಿದ್ದ ವಿದ್ಯಾರ್ಥಿನಿಯೊಬ್ಬಳು ಅವರಿಂದ ಹಸ್ತಾಕ್ಷರವನ್ನು ಪಡೆದಿದ್ದಳು. ಈ ವೇಳೆ ರಾಹುಲ್ ಗಾಂಧಿ ಹಸ್ತಾಕ್ಷರ ಹಾಕುತ್ತಿದ್ದಂತೆ, ವಿದ್ಯಾರ್ಥಿನಿ ಭಾವಪರವಶಳಾಗಿ ಕುಣಿಯಲಾರಂಭಿಸಿದ್ದಳು. ಈ ವೇಳೆ ರಾಹುಲ್ ಗಾಂಧಿ ಆಕೆಯನ್ನು ವೇದಿಕೆಯಿಂದ ತಬ್ಬಿಕೊಂಡು, ಫೋಟೊಗೆ ಪೋಸ್ ಕೊಟ್ಟಿದ್ದು ವೀಡಿಯೊದಲ್ಲಿ ಕಂಡುಬಂದಿದೆ.   



Join Whatsapp