January 14, 2021
ತಮಿಳುನಾಡಿನಲ್ಲಿ ಜಲ್ಲಿಕಟ್ಟು ವೀಕ್ಷಿಸಿದ ರಾಹುಲ್ ಗಾಂಧಿ

ಮದುರೈ : ಪೊಂಗಲ್ ಹಬ್ಬದ ಪ್ರಯುಕ್ತ ತಮಿಳುನಾಡಿನ ಅವನಿಯಪುರಂನಲ್ಲಿ ನಡೆಯುವ ಜಲ್ಲಿಕಟ್ಟು ಕ್ರೀಡೆಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ವೀಕ್ಷಿಸಿ ಸಂಭ್ರಮಿಸಿದರು.
ಪೊಂಗಲ್ ಹಬ್ಬದಲ್ಲಿ ಪಾಲ್ಗೊಳ್ಳಲೆಂದು ತಮಿಳುನಾಡಿಗೆ ಆಗಮಿಸಿದ ರಾಹುಲ್ ಗಾಂಧಿ ಜಲ್ಲಿಕಟ್ಟು ವೀಕ್ಷಿಸಿದರು. ಡಿಎಂಕೆ ಯುವ ಘಟಕದ ಕಾರ್ಯದರ್ಶಿ ಉದಯನಿಧಿ ಸ್ಟಾಲಿನ್ ಈ ವೇಳೆ ರಾಹುಲ್ ಗಾಂಧಿಗೆ ಸಾಥ್ ನೀಡಿದರು.
ಈ ವೇಳೆ ಮಾತನಾಡಿದ ರಾಹುಲ್ ಗಾಂಧಿ, ತಮಿಳು ಭಾಷೆ-ಸಂಸ್ಕೃತಿಯನ್ನು ಬದಿಗಿರಿಸಿ, ತಮಿಳುನಾಡು ಜನರ ಮೇಲೆ ಒರಟು ಭಾವ ತೋರಿಸಬಹುದೆಂದು ಯೋಚಿಸುವವರಿಗೆ ಸಂದೇಶ ನೀಡಲು ನಾನಿಲ್ಲಿಗೆ ಬಂದಿದ್ದೇನೆ ಎಂದರು.
ಜಲ್ಲಿಕಟ್ಟು ಕ್ರೀಡೆ ನಡೆಸಲು ಕೈಗೊಂಡಿರುವ ವ್ಯವಸ್ಥೆಗಳ ಬಗ್ಗೆ ರಾಹುಲ್ ಗಾಂಧಿ ಮೆಚ್ಚುಗೆ ವ್ಯಕ್ತಪಡಿಸಿದರು. ಇಂತಹ ವ್ಯವಸ್ಥೆಗಳಿಂದ ಪ್ರಾಣಿಗೆ ಅಥವಾ ಯುವಕರಿಗೆ ತೊಂದರೆಯಾಗುವುದಿಲ್ಲ ಎಂದು ಅವರು ಹೇಳಿದರು.