ಬೆಂಗಳೂರು: ಟೀಂ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಕಿರಿಯ ಮಗ ಅನ್ವಯ್ ದ್ರಾವಿಡ್ ಅವರು 14 ವರ್ಷದೊಳಗಿನವರ (U-14) ಕರ್ನಾಟಕ ಕ್ರಿಕೆಟ್ ತಂಡದ ನಾಯಕರಾಗಿ ನೇಮಕವಾಗಿದ್ದಾರೆ.
ಕೇರಳದಲ್ಲಿ ಇದೇ 23 ಮತ್ತು ಫೆ.11ರಂದು ನಡೆಯಲಿರುವ ‘ಪಿ ಕೃಷ್ಣ ಮೂರ್ತಿ ಟ್ರೋಫಿ’ ಅಂತರ ವಲಯ ಟೂರ್ನಿಯಲ್ಲಿ ಕರ್ನಾಟಕದ ಕಿರಿಯರ ತಂಡವನ್ನು ಅನ್ವಯ್ ಮುನ್ನಡೆಸಲಿದ್ದಾರೆ.
ಅನ್ವಯ್ ಅವರ ಅಣ್ಣ, ಸಮಿತ್ ಕೂಡ ಅಂಡರ್-14 ಮಟ್ಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದರು.
ರಾಹುಲ್ ದ್ರಾವಿಡ್ ಅವರ ಮಗ ಕಿರಿಯರ ತಂಡಕ್ಕೆ ನಾಯಕನಾಗಿ ನೇಮಕವಾಗಿರುವುದಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಅನ್ವಯ್ಗೆ ಶುಭ ಹಾರೈಸಿದ್ದರೆ, ಕೆಲವರು ಇದು ಸ್ವಜನಪಕ್ಷಪಾತವೆಂದು ಆಕ್ಷೇಪಿಸಿದ್ದಾರೆ.
ಆಕ್ಷೇಪಗಳಿಗೆ ತಿರುಗೇಟು ನೀಡಿರುವ ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್, ‘ರಾಹುಲ್ ಅವರ ಕಿರಿಯ ಮಗ ಅನ್ವಯ್ ದ್ರಾವಿಡ್ ಕರ್ನಾಟಕದಲ್ಲಿ ಜೂನಿಯರ್ ಹಂತಗಳ ಪಂದ್ಯಗಳಲ್ಲಿ ಸ್ಥಿರ ಪ್ರದರ್ಶನ ನೀಡಿದ್ದಾರೆ. ಶ್ರೇಷ್ಠ ಕ್ರಿಕೆಟಿಗನ ಮಗ ಎಂದು ಯಾರೂ ಕೂಡ ವೃತ್ತಿಪರ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆಯಲು ಸಾಧ್ಯವಿಲ್ಲ. ಸ್ವಜನಪಕ್ಷಪಾತವನ್ನು ಎಳೆದುತರುವ ಬದಲು ಆ ಮಗುವಿಗೆ ಶುಭ ಹಾರೈಸಿ’ ಎಂದು ಸಲಹೆ ನೀಡಿದ್ದಾರೆ.