ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ನೇಮಕ

Prasthutha|

ನವದೆಹಲಿ: ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ನೇಮಕಗೊಂಡಿದ್ದಾರೆ. ಯುಎಇನಲ್ಲಿ ನಡೆಯುತ್ತಿರುವ ಟಿ-20 ವಿಶ್ವಕಪ್ ಬಳಿಕ ಮುಖ್ಯ ಕೋಚ್ ಹುದ್ದೆಯಿಂದ ರವಿಶಾಸ್ತ್ರಿ ನಿರ್ಗಮಿಸಲಿದ್ದು, ಬಳಿಕ ರಾಹುಲ್ ದ್ರಾವಿಡ್ ನೂತನ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.

- Advertisement -

ಐಸಿಸಿ ಟಿ-20 ವಿಶ್ವಕಪ್ ಬಳಿಕ ನ್ಯೂಜಿಲೆಂಡ್ ತಂಡ ಟಿ-20 ಹಾಗೂ ಟೆಸ್ಟ್ ಸರಣಿಯನ್ನಾಡಲು ಭಾರತಕ್ಕೆ ಆಗಮಿಸಲಿದ್ದು, ಇದು ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್’ರ ಮೊದಲ ಸರಣಿಯಾಗಲಿದೆ.

ಅಂಡರ್ 19 ಟೀಮ್ ಇಂಡಿಯಾ ಹಾಗೂ ಭಾರತ ಎ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದ ರಾಹುಲ್ ದ್ರಾವಿಡ್ ಕಳೆದ ಬಾರಿ ಶ್ರೀಲಂಕಾ ಪ್ರವಾಸದಲ್ಲಿ ಭಾರತ ತಂಡದ ಹಂಗಾಮಿ ಕೋಚ್ ಆಗಿದ್ದರು.  ರವಿ ಶಾಸ್ತ್ರಿ ಬಳಿಕ  ಆ ಸ್ಥಾನಕ್ಕೆ ದ್ರಾವಿಡ್ ಅವರನ್ನು ನೇಮಿಸಲು ಬಿಸಿಸಿಐ ಆಸಕ್ತಿ ವಹಿಸಿತ್ತು. ಆದರೆ ಮೊದಲಿಗೆ ದ್ರಾವಿಡ್, ತಾನು ಯುವ ಆಟಗಾರರಿಗೆ ಮಾರ್ಗದರ್ಶನ ನೀಡಲು ಬಯಸಿದ್ದು, ಹೀಗಾಗಿ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡಮಿಯಲ್ಲಿ ಮುಂದುವರಿಯುವುದಾಗಿ ಹೇಳಿದ್ದರು.

- Advertisement -

ಐಪಿಎಲ್ ನಡೆಯುತ್ತಿರುವ ವೇಳೆ ರಾಹುಲ್ ದ್ರಾವಿಡ್ ಜೊತೆ ಹಲವು ಸಭೆಗಳನ್ನು ನಡೆಸಿದ್ದ ಬಿಸಿಸಿಐ ಅವರ ಮನವೊಲಿಸಲು ಯಶಸ್ವಿಯಾಗಿತ್ತು. ಬಳಿಕ ನೂತನ ಕೋಚ್ ಹುದ್ದೆಗಾಗಿ ಇತ್ತೀಚೆಗಷ್ಟೇ ಬಿಸಿಸಿಐ ಅರ್ಜಿ ಆಹ್ವಾನಿಸಿದ್ದ ವೇಳೆ ರಾಹುಲ್ ದ್ರಾವಿಡ್ ಅರ್ಜಿ ಸಲ್ಲಿಸಿದ್ದರು. ಇದೀಗ ಟೀಮ್ ಇಂಡಿಯಾ ಕೋಚ್ ಆಗಿ ನೇಮಕಗೊಂಡಿದ್ದಾರೆ. ಮೂಲಗಳ ಪ್ರಕಾರ ಬಿಸಿಸಿಐನಿಂದ ರಾಹುಲ್ ದ್ರಾವಿಡ್ 10 ಕೋಟಿ ಸಂಭಾವನೆ ಪಡೆಯಲಿದ್ದಾರೆ.



Join Whatsapp