ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬ್ಯಾರಿ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ರೂಪುಗೊಂಡ ಬ್ಯಾರಿ ಸಾಹಿತ್ಯ ಅಕಾಡಮಿಯ ಆರಂಭದ ದಿನಗಳಲ್ಲೇ ಜಿಲ್ಲೆಯ ಬ್ಯಾರಿ ಸಮುದಾಯ ಒಂದು ಬ್ಯಾರಿ ಭವನದ ಸ್ಥಾಪನೆಯ ಬೇಡಿಕೆ ಇಟ್ಟಿತ್ತು. ಇದರ ಪ್ರಕಾರ ಈ ಹಿಂದಿನ ಅಕಾಡೆಮಿ ಅಧ್ಯಕ್ಷರ ಅವಧಿಯಲ್ಲಿ ಬೈತುರ್ಲಿ ಗ್ರಾಮದಲ್ಲಿ ಅಕಾಡೆಮಿಯು ಲಕ್ಷಾಂತರ ಮೊತ್ತ ನೀಡಿ ಜಮೀನನ್ನು ಪಡೆದುಕೊಂಡಿತ್ತು. ನಂತರ ಅತ್ಯಧಿಕ ಬ್ಯಾರಿ ಭಾಷಿಕರನ್ನು ಹೊಂದಿರುವ ಮಂಗಳೂರು ಕ್ಷೇತ್ರದ ತೊಕ್ಕೊಟು ಪರಿಸರದಲ್ಲಿ ಬ್ಯಾರಿ ಭವನ ನಿರ್ಮಾಣ ಮಾಡುವ ಕಾರಣ ನೀಡಿ ಈಗಿನ ಅಧ್ಯಕ್ಷರು ಈ ಜಮೀನನ್ನು ಮರಳಿ ನೀಡಿರುತ್ತಾರೆ.
ಇತ್ತೀಚೆಗೆ ಕರ್ನಾಟಕ ಸರಕಾರವು ತೊಕ್ಕೊಟ್ಟು ಪರಿಸರದಲ್ಲಿ ಬ್ಯಾರಿ ಭವನ ನಿರ್ಮಿಸಲು 6 ಕೋಟಿ ರೂಪಾಯಿ ಮಂಜೂರು ಮಾಡಿದ್ದರೂ ಕೂಡಾ ಬ್ಯಾರಿ ಸಾಹಿತ್ಯ ಅಕಾಡಮಿ ಅಧ್ಯಕ್ಷರಾದ ರಹೀಂ ಉಚ್ಚಿಲ್ ರವರು ಸ್ಥಳೀಯ ಸಂಘ ಪರಿವಾರ ಹಾಗೂ ಬಜರಂಗದಳದ ಕೋಮುವಾದಿ ಗೂಂಡಾಗಳಿಗೆ ಹೆದರಿ ಬ್ಯಾರಿ ಭವನದ ಬದಲು ಕೇವಲ 3 ಕೋಟಿ ವೆಚ್ಚದಲ್ಲಿ ಬ್ಯಾರಿ ಸಾಹಿತ್ಯ ಅಕಾಡೆಮಿಯ ಕಚೇರಿ ನಿರ್ಮಿಸಲು ಹೊರಟಿರುವ ಏಕ ಪಕ್ಷೀಯ ನಿರ್ಧಾರವು ಇಡೀ ಬ್ಯಾರಿ ಸಮುದಾಯಕ್ಕೆ ಹಾಗೂ ಬ್ಯಾರಿ ಸಾಹಿತಿಗಳಿಗೆ ಮಾಡಿರುವ ಮಹಾ ವಂಚನೆಯಾಗಿದ್ದು, ಇದನ್ನು SDPI ಖಂಡಿಸುತ್ತದೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್ ಬಜತ್ತೂರು ತಿಳಿಸಿದ್ದಾರೆ
ತುಳು, ಕೊಂಕಣಿ, ಕೊಡವ, ಅರೆಭಾಷೆ ಮುಂತಾದ ಭಾಷೆಯ ಅಕಾಡೆಮಿಗಳ ಮೂಲಕ ಭವನ ನಿರ್ಮಾಣವಾಗುತ್ತಿರುವಾಗ ಬ್ಯಾರಿ ಭವನಕ್ಕೆಮಾತ್ರ ವಿರೋಧ ವ್ಯಕ್ತ ಪಡಿಸುತ್ತಿರುವ ಬಿಜೆಪಿಗರ ಮುಸ್ಲಿಂ ವಿರೋಧಿ ನಿಲುವನ್ನು ನಾವೆಲ್ಲರೂ ಪ್ರಶ್ನಿಸಬೇಕಾಗಿದೆ. ಬಿಜೆಪಿ ಮತ್ತು ಸಂಘ ಪರಿವಾರದ ಮುಸ್ಲಿಂ ದ್ವೇಷವು ಸಾಹಿತ್ಯ ಕ್ಷೇತ್ರವನ್ನೂ ಬಿಡದೆ ಕಾಡುತ್ತಿರುವುದು ಒಂದು ಅಪಾಯಕಾರಿ ಬೆಳವಣಿಗೆ ಯಾಗಿದೆ. ಇದಕ್ಕೆ ಸಂಘ ಪರಿವಾರದ ಏಜೆಂಟರಾದ ಅಕಾಡೆಮಿ ಅಧ್ಯಕ್ಷರು ಸಂಪೂರ್ಣ ಸಾಥ್ ನೀಡುವ ಮೂಲಕ ಮುಸ್ಲಿಂ ಸಮುದಾಯಕ್ಕೆ ಅಪಚಾರವೆಸಗಿರುತ್ತಾರೆ.
ಆದ್ದರಿಂದ ಬಿಜೆಪಿ ಮತ್ತು ಸಂಘ ಪರಿವಾರದ ಈ ಮುಸ್ಲಿಂ ವಿರೋಧಿ ನಿಲುವನ್ನು ಖಂಡಿಸಿ ಎಸ್.ಡಿ.ಪಿ.ಐ ವತಿಯಿಂದ ಕಾನೂನು ಹೋರಾಟ ಸೇರಿದಂತೆ ಜನ ಜಾಗೃತಿ ಮೂಡಿಸಲಾಗುವುದು ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದಾತ್ ಬಜತ್ತೂರು ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.