ಸೌದಿ ಜೈಲಿನಲ್ಲಿರುವ ಕೇರಳದ ರಹೀಂಗೆ 34 ಕೋಟಿ ರೂ. ದೇಣಿಗೆ ಸಂಗ್ರಹ: ಬೋಬಿ ಚೆಮ್ಮನ್ನೂರ್ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ

Prasthutha|

ಕೋಯಿಕ್ಕೋಡ್: ಸೌದಿ ಅರೇಬಿಯಾದಲ್ಲಿ ಮರಣದಂಡನೆಗೆ ಗುರಿಯಾದ ವ್ಯಕ್ತಿಯನ್ನು ರಕ್ಷಿಸಲು ಕೇರಳದ ಜನರು ಒಗ್ಗಟ್ಟು ಮತ್ತು ಸಹಾನುಭೂತಿ ಪ್ರದರ್ಶಿಸಿದ್ದು, ದೇಣಿಗೆ ಮೂಲಕ ಒಟ್ಟಾರೆ ₹34 ಕೋಟಿ ಸಂಗ್ರಹಿಸಿದ್ದಾರೆ.

- Advertisement -


ಹಣ ಸಂಗ್ರಹಿಸಲು ಬೋಬಿ ಚೆಮ್ಮನ್ನೂರ್ ಅವರು ಕೆಲವು ದಿನಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ಅಲ್ಲದೆ ತಮ್ಮ ಕೆಲ ಉತ್ಪನ್ನಗಳನ್ನು ಮಾರಾಟ ಮಾಡಿ, ಅದರಿಂದ ಬಂದ ಹಣವನ್ನು ನೆರವು ನೀಡಿದರು. ಬೋಬಿ ಚೆಮ್ಮನ್ನೂರ್ ಅವರ ಈ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.

ಅಬ್ದುಲ್ ರಹೀಮ್ ಕಳೆದ 18 ವರ್ಷಗಳಿಂದ ಸೌದಿ ಜೈಲಿನಲ್ಲಿದ್ದಾರೆ. 2006 ನವೆಂಬರ್ ನಲ್ಲಿ, ತನ್ನ 26 ನೇ ವಯಸ್ಸಿನಲ್ಲಿ, ಅಬ್ದುಲ್ ರಹೀಮ್ ಹೌಸ್ ಡ್ರೈವರ್ ವೀಸಾದಲ್ಲಿ ರಿಯಾದ್ಗೆ ಹೋಗಿದ್ದರು. ತನ್ನ ವೀಸಾ ಪ್ರಾಯೋಜಕ ಫೈಜ್ ಅಬ್ದುಲ್ಲಾ ಅಬ್ದುಲ್ ರಹ್ಮಾನ್ ಅಲ್ ಶಹರಿ ಅವರ ಮಗ ಅನಸ್ ಅವರನ್ನು ನೋಡಿಕೊಳ್ಳುವುದು ಅವರ ಕೆಲಸವಾಗಿತ್ತು. ಅಂಗವೈಕಲ್ಯತೆಯಿಂದ ಕತ್ತಿನ ಕೆಳಗೆ ನಿಶ್ಚಲನಾಗಿದ್ದ ಅನಸ್ ಗೆ ಕುತ್ತಿಗೆಗೆ ಅಳವಡಿಸಲಾಗಿದ್ದ ಉಪಕರಣದ ಮೂಲಕ ಆಹಾರ ನೀಡಲಾಗುತ್ತಿತ್ತು. 2006 ಡಿಸೆಂಬರ್ 24 ರಂದು ಶಾಪಿಂಗ್ಗೆಂದು ಹೊರಗೆ ಹೋಗುತ್ತಿದ್ದಾಗ ಟ್ರಾಫಿಕ್ ಸಿಗ್ನಲ್ ನಲ್ಲಿ ನಿಂತಿದ್ದ ಕಾರನ್ನು ಸಿಗ್ನಲ್ ಕಟ್ ಮಾಡಿ ಚಲಿಸುವಂತೆ ಒತ್ತಾಯ ಮಾಡಿದ್ದ ಅನಸ್, ಚಾಲಕ ರಹೀಮ್ ಜೊತೆ ಜಗಳವಾಡಿದ್ದನು. ಇದನ್ನು ತಡೆಯಲು ಮುಂದಾದಾಗ ಆಕಸ್ಮಿಕವಾಗಿ ಕೈ ಕುತ್ತಿಗೆಯಲ್ಲಿದ್ದ ಉಪಕರಣಕ್ಕೆ ತಾಗಿ ಅನಸ್ ಪ್ರಜ್ಞೆ ತಪ್ಪಿ ಬಿದ್ದು, ಬಳಿಕ ಮರಣ ಹೊಂದಿದ್ದಾನೆ.

- Advertisement -


ಈ ಪ್ರಕರಣದಲ್ಲಿ ಜೈಲು ಸೇರಿದ ಅವರಿಗೆ, ಕ್ಷಮಾದಾನ ನೀಡಲು ಬಾಲಕನ ಕುಟುಂಬ ನಿರಾಕರಿಸಿತು. ಇದರ ಪರಿಣಾಮ ಅವರಿಗೆ 2018ರಲ್ಲಿ ಮರಣದಂಡನೆ ಶಿಕ್ಷೆ ವಿಧಿಸಲಾಯಿತು.
ಈ ಸಂಬಂಧ ಸಲ್ಲಿಕೆಯಾದ ಮೇಲ್ಮನವಿಗಳನ್ನು ಉನ್ನತ ನ್ಯಾಯಾಲಯಗಳು ತಿರಸ್ಕರಿಸಿದವು. ಆದರೆ, ರಹೀಂ ಅವರು ಪರಿಹಾರ ಮೊತ್ತ ನೀಡಿದರೆ ಕ್ಷಮಿಸುವುದಾಗಿ ಮೃತ ಬಾಲಕನ ಕುಟುಂಬ ಒಪ್ಪಿಕೊಂಡಿತು ಎಂದು ಕ್ರಿಯಾ ಸಮಿತಿ ಸದಸ್ಯರು ಮಾಧ್ಯಮಗಳಿಗೆ ತಿಳಿಸಿದರು.


ರಿಯಾದ್ನಲ್ಲಿರುವ ಕೇರಳ ಮೂಲದ 75ಕ್ಕೂ ಹೆಚ್ಚು ಸಂಸ್ಥೆಗಳು, ಉದ್ಯಮಿ ಬಾಬ್ಬಿ ಚೆಮ್ಮನ್ನೂರ್, ರಾಜ್ಯದ ವಿವಿಧ ರಾಜಕೀಯ ಸಂಘಟನೆಗಳು, ಸಾಮಾನ್ಯ ಜನರು ಆರ್ಥಿಕ ನೆರವು ನೀಡಿದ್ದಾರೆ ಎಂದು ಅವರು ವಿವರಿಸಿದರು.


‘ಇಷ್ಟೊಂದು ಮೊತ್ತ ಸಂಗ್ರಹಿಸಬಹುದು ಎಂದು ನಾನು ಯೋಚಿಸಿಯೇ ಇರಲಿಲ್ಲ. ₹ 34 ಕೋಟಿ ಸಂಗ್ರಹಿಸುವುದು ಹೇಗೆ ಎಂಬುದು ತಿಳಿಯದೆ ದಿಕ್ಕುತೋಚದಂತಾಗಿತ್ತು. ಅದರೆ ಈಗ ಅದು ಸಾಧ್ಯವಾಗಿದೆ’ ಎಂದು ರಹೀಂ ತಾಯಿ ಪ್ರತಿಕ್ರಿಯಿಸಿದ್ದಾರೆ.



Join Whatsapp