ನ್ಯೂಯಾರ್ಕ್: 22 ಗ್ರ್ಯಾನ್ ಸ್ಲ್ಯಾಮ್‌ಗಳ ಒಡೆಯ ಸ್ಪೇನ್‌ನ ರಫೆಲ್ ನಡಾಲ್ , ಅವರು ಅಮೆರಿಕ ಓಪನ್ ಗ್ರ್ಯಾನ್‌ಸ್ಲಾಮ್ ಟೆನಿಸ್ ಟೂರ್ನಿಯ ಮೂರನೇ ಸುತ್ತು ಪ್ರವೇಶಿಸಿದ್ದಾರೆ. ಪುರುಷರ ಸಿಂಗಲ್ಸ್ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ ನಡಾಲ್, ಇಟಲಿಯ ಫ್ಯಾಬಿಯೊ ಫಾಗ್ನಿನಿ ವಿರುದ್ಧ 2-6, 6-4, 6-2, 6-1 ಅಂತರದಲ್ಲಿ ಅಮೋಘ ಗೆಲುವು ಸಾಧಿಸಿದರು.
ಪಂದ್ಯದ ಆರಂಭದಲ್ಲಿ ಇಟಲಿಯ ಆಟಗಾರ ನಡಾಲ್ ವಿರುದ್ಧ ಮೇಲುಗೈ ಸಾಧಿಸಿದ್ದರು. ಮೊದಲ ಸೆಟ್‌ಅನ್ನು ಏಕಪಕ್ಷೀಯವಾಗಿ 2-6 ಅಂತರದಲ್ಲಿ ಫ್ಯಾಬಿಯೊ ಫಾಗ್ನಿನಿ ತಮ್ಮದಾಗಿಸಿಕೊಂಡರು. ಆದರೆ ಕಮ್ ಬ್ಯಾಕ್ ಖ್ಯಾತಿಯ ಸ್ಪೇನ್‌ನ ಆಟಗಾರ, ನಂತರದ ಎರಡು ಸೆಟ್‌ಗಳನ್ನು 6-4, 6-2 ಅಂತರದಲ್ಲಿ ತಮ್ಮದಾಗಿಸಿಕೊಂಡರು. ನಿರ್ಣಾಯಕ ನಾಲ್ಕನೇ ಸೆಟ್‌ನಲ್ಲಿನಡಾಲ್, 3–0 ಅಂಕಗಳ ಅಂತರದಲ್ಲಿ ಮುನ್ನಡೆಯಲ್ಲಿದ್ದಾಗ ಎದುರಾಳಿಗೆ ಚೆಂಡನ್ನು ಹಿಂತಿರುಗಿಸುವ ವೇಳೆ ನಡಾಲ್ ಮೂಗಿಗೆ ಗಾಯಮಾಡಿಕೊಂಡರು.
ನೆಲಕ್ಕೆ ಬಡಿದ ರಾಕೆಟ್, ಅವರ ಮೂಗಿಗೆ ಅಪ್ಪಳಿಸಿದ್ದರಿಂದ ರಕ್ತ ಸುರಿಯಿತು. ನೋವಿನಿಂದ ನರಳಿದ ನಡಾಲ್, ಕೆಲಹೊತ್ತು ಅಂಗಳದಲ್ಲಿ ಮಲಗಿದರು. ಪ್ರಥಮ ಚಿಕಿತ್ಸೆ ಪಡೆದ ಬಳಿಕ ಮೂಗಿಗೆ ಬ್ಯಾಂಡೇಜ್ ಹಾಕಿಕೊಂಡು ಪಂದ್ಯವದಲ್ಲಿ ಮುಂದುವರಿದರು. ಆ ಬಳಿಕ ಎದುರಾಳಿಗೆ ಕೇವಲ ಮೂರು ಪಾಯಿಂಟ್ ಮಾತ್ರ ಬಿಟ್ಟುಕೊಟ್ಟು, ಛಲ ಬಿಡದೆ ಹೋರಾಡಿ ಪಂದ್ಯ ಗೆದ್ದರು.
23ನೇ ಗ್ರ್ಯಾನ್‌ಸ್ಲಾಮ್ ನಿರೀಕ್ಷೆಯಲ್ಲಿರುವ ಸ್ಪೇನ್‌ನ ಆಟಗಾರ, ಮುಂದಿನ ಸುತ್ತಿನಲ್ಲಿ ಫ್ರಾನ್ಸ್‌ನ ರಿಚರ್ಡ್ ಗ್ಯಾಸ್ಕೆಟ್‌ರನ್ನು ಎದುರಿಸಲಿದ್ದಾರೆ.
ವೀನಸ್– ಸೆರೆನಾಗೆ ಸೋಲು: ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಅಮೆರಿಕದ ಸೆರೆನಾ ವಿಲಿಯಮ್ಸ್ ಮತ್ತು ವೀನಸ್ ವಿಲಿಯಮ್ಸ್ ಜೋಡಿಗೆ ಸೋಲು ಎದುರಾಯಿತು. 2018ರ ಬಳಿಕ ಇದೇ ಮೊದಲ ಬಾರಿಗೆ ಜತೆಯಾಗಿ ಆಡಿದ ವಿಲಿಯಮ್ಸ್ ಸಹೋದರಿಯರು 6–7, 4–6 ರಲ್ಲಿ ಜೆಕ್ ಗಣರಾಜ್ಯದ ಲಿಂಡಾ ನೊಸ್ಕೊವಾ– ಲೂಸಿ ಹ್ರದೆಕಾ ಎದುರು ಪರಾಭವಗೊಂಡಿತು. ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಮೂರನೇ ಸುತ್ತು ಪ್ರವೇಶಿಸಿರುವ ಸೆರೆನಾ, ಆಸ್ಟ್ರೇಲಿಯಾದ ಅಯ್ಲಾ ಟೋಮ್ಲಿಯಾನೊವಿಚ್ ಅವರ ಸವಾಲನ್ನು ಎದುರಿಸಲಿದ್ದಾರೆ.