ಆರ್. ಪ್ರಜ್ಞಾನಂದ ಭಾರತದ ನಂ.1 ಚೆಸ್‌ಪಟು

Prasthutha|

ನೆದರ್ಲೆಂಡ್ಸ್: ನೆದರ್ಲೆಂಡ್ಸ್‌ನಲ್ಲಿ ನಡೆಯುತ್ತಿರುವ “ಟಾಟಾ ಸ್ಟೀಲ್‌ ಚೆಸ್‌ ಟೂರ್ನಮೆಂಟ್‌’ನಲ್ಲಿ ವಿಶ್ವ ಚಾಂಪಿಯನ್‌ ಆಟಗಾರ, ಚೀನದ ಡಿಂಗ್‌ ಲಿರೆನ್‌ ಅವರಿಗೆ 4ನೇ ಸುತ್ತಿನಲ್ಲಿ ಆಘಾತವಿಕ್ಕುವ ಮೂಲಕ ಆರ್‌. ಪ್ರಜ್ಞಾನಂದ ಭಾರತದ ನಂಬರ್‌ ವನ್‌ ಚೆಸ್‌ ಆಟಗಾರನಾಗಿ ಹೊರ ಹೊಮ್ಮಿದ್ದಾರೆ. ಇದುವರೆಗೆ ಲೆಜೆಂಡ್ರಿ ಚೆಸ್‌ಪಟು ವಿಶ್ವನಾಥನ್‌ ಆನಂದ್‌ ಈ ಪಟ್ಟದಲ್ಲಿ ರಾಜಾಜಿಸುತ್ತಿದ್ದರು.

- Advertisement -

ಪ್ರಜ್ಞಾನಂದ ಅವರ ಒಟ್ಟು ಫಿಡೆ ರೇಟಿಂಗ್‌ ಅಂಕವೀಗ 2748.3ಕ್ಕೆ ಏರಿದೆ. 5 ಬಾರಿಯ ವಿಶ್ವ ಚಾಂಪಿಯನ್‌ ವಿಶ್ವನಾಥನ್‌ ಆನಂದ್‌ ಹೊಂದಿರುವ ಅಂಕ 2748 ಆಗಿದೆ.

ಡಿಂಗ್‌ ಲಿರೆನ್‌ ವಿರುದ್ಧ ಕಪ್ಪು ಕಾಯಿಗಳೊಂದಿಗೆ ಆಡಲಿಳಿದ ಆರ್‌. ಪ್ರಜ್ಞಾನಂದ 62 ನಡೆಗಳಲ್ಲಿ ಗೆಲುವು ಸಾಧಿಸಿದರು. ಇದರೊಂದಿಗೆ ಹಾಲಿ ವಿಶ್ವ ಚಾಂಪಿಯನ್‌ ಆಟಗಾರ ನನ್ನು ಮಣಿಸಿದ ಭಾರತದ 2ನೇ ಚೆಸ್‌ ಆಟಗಾರನೆನಿಸಿದರು. ವಿಶ್ವನಾಥನ್‌ ಆನಂದ್‌ ಮೊದಲಿಗ. ಪ್ರಜ್ಞಾನಂದ 2023ರ ಟಾಟಾ ಸ್ಟೀಲ್‌ ಟೂರ್ನಿಯಲ್ಲೂ ಲಿರೆನ್‌ ವಿರುದ್ಧ ಜಯ ಸಾಧಿಸಿದ್ದರು.

- Advertisement -


ಸಂತೋಷ ಆಗುತ್ತಿದೆ. ಆದರೆ ನನ್ನ ವೈಯಕ್ತಿಕ ಗುರಿ ಏನಿದ್ದರೂ ಅತ್ಯುತ್ತಮ ಪ್ರದರ್ಶನ ನೀಡುವುದು. ಇದು ಅತ್ಯಂತ ಕಠಿನ ಪಂದ್ಯಾವಳಿ. ಉಳಿದೆಲ್ಲ ಟೂರ್ನಿಗಳು 9 ಸುತ್ತುಗಳನ್ನು ಹೊಂದಿದ್ದರೆ ಇಲ್ಲಿ 13 ಸುತ್ತುಗಳಿವೆ. ಅಂದರೆ, ಒಂದು ಹೆಚ್ಚುವರಿ ಕೂಟವನ್ನು ಆಡಿದ ಅನುಭವವಾಗುತ್ತದೆ ಎಂದು ಪ್ರಜ್ಞಾನಂದ ಹೇಳಿದ್ದಾರೆ.

ಗುರುವಾರದ 5ನೇ ಸುತ್ತಿನ ಪಂದ್ಯದಲ್ಲಿ ಆರ್‌. ಪ್ರಜ್ಞಾನಂದ ಅಗ್ರಸ್ಥಾನಿಯಾಗಿರುವ, ಆತಿಥೇಯ ದೇಶದ ಅನಿಶ್‌ ಗಿರಿ ವಿರುದ್ಧ ಆಡಲಿದ್ದಾರೆ. ಅನಿಶ್‌ ಗಿರಿ 3.5 ಅಂಕ ಹೊಂದಿದ್ದಾರೆ.



Join Whatsapp