ಕೋಲ್ಕತ್ತಾ: ಕರ್ನಾಟಕದ ಮಾಜಿ ಡಿಜಿ ಹಾಗೂ ಐಜಿಪಿ ಆರ್.ಕೆ.ದತ್ತ ಅವರನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸಲಹೆಗಾರರನ್ನಾಗಿ ನೇಮಿಸಲಾಗಿದೆ. ನೇಮಕಾತಿ ಕುರಿತು ಪಶ್ಚಿಮ ಬಂಗಾಳ ಸರ್ಕಾರ ಆದೇಶ ಹೊರಡಿಸಿದೆ.
ಪ್ರಸ್ತುತ ಗೃಹ ಮತ್ತು ಗುಡ್ಡಗಾಡು ವ್ಯವಹಾರಗಳ ಇಲಾಖೆಯಲ್ಲಿ ಪೊಲೀಸ್ ಕಲ್ಯಾಣ ಸಲಹೆಗಾರರಾಗಿರುವ ಆರ್.ಕೆ. ದತ್ತ ಅವರನ್ನು ಉನ್ನತ ಹುದ್ದೆಗೆ ನೇಮಿಸಲಾಗಿದೆ. ನಿವೃತ್ತ ಐಪಿಎಸ್ ಅಧಿಕಾರಿಯನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿಯ ಸಲಹೆಗಾರರಾಗಿ ನೇಮಕ ಮಾಡುವ ಜತೆಗೆ ಭದ್ರತೆ, ಕಾನೂನು ಮತ್ತು ಸುವ್ಯವಸ್ಥೆಗಳು ಸೇರಿದಂತೆ ಗಡಿ ಪ್ರದೇಶಗಳು, ಗೃಹ ಮತ್ತು ಹಿಲ್ ಅಫೇರ್ಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಲು ಅವಕಾಶ ಮಾಡಲಾಗಿದೆ.
ಎರಡು ವರ್ಷ ಪೊಲೀಸ್ ಮಹಾನಿರ್ದೇಶಕರ ಶ್ರೇಣಿಯಲ್ಲಿ ಕೆಲಸ ನಿರ್ವಹಿಸಲು ಇವರಿಗೆ ಅವಕಾಶವಿದೆ. ಇವರು ಇದಕ್ಕೂ ಮೊದಲು ಕರ್ನಾಟಕದ ಡಿಜಿ ಹಾಗೂ ಐಜಿಪಿಯಾಗಿ ಕೆಲಸ ಮಾಡಿದ್ದಾರೆ. ದತ್ತ ಅವರ ಕಾರ್ಯಕ್ಷಮತೆ ಗಮನಿಸಿ ಪಶ್ಚಿಮ ಬಂಗಾಳ ಸರ್ಕಾರ ನೇಮಕ ಮಾಡಿದೆ ಎಂದು ತಿಳಿದುಬಂದಿದೆ.
ಕರ್ನಾಟಕ ಕೇಡರ್‌ನ 1981ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದ ರೂಪಕ್ ಕುಮಾರ್ ದತ್ತ (ಆರ್.ಕೆ.ದತ್ತ) ಅವರು ನಿವೃತ್ತರಾಗಿದ್ದಾರೆ. ಅಲ್ಲದೆ, ಆರ್.ಕೆ.ದತ್ತ ಅವರು ಕಾರವಾರ ಹಾಗೂ ಧಾರವಾಡದ ಎಸ್‌ಪಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ.