ಶಿರಾಡಿ ಘಾಟಿಯಲ್ಲಿ ಏಕ ಮುಖ ಸಂಚಾರಕ್ಕೆ ಶೀಘ್ರ ವ್ಯವಸ್ಥೆ; ಸಚಿವ ಸಿ.ಸಿ.ಪಾಟೀಲ್

Prasthutha|

ಬೆಂಗಳೂರು: ಹಾಸನ ಜಿಲ್ಲೆ ಶಿರಾಡಿ ಘಾಟಿಯ ದೋಣಿಗಾಲ್ ಬಳಿ ಭೂಕುಸಿತ ಆಗಿರುವುದರಿಂದ ತಕ್ಷಣವೇ ಅಲ್ಲಿ ವಾಹನಗಳಿಗೆ ಏಕಮುಖ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಲೊಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ತಿಳಿಸಿದರು.

- Advertisement -

  ಅಧಿಕಾರಿಗಳ ಜತೆ ಮಂಗಳವಾರ ನಡೆಸಿದ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು ಎರಡೂವರೆ ಕಿ.ಮೀ. ಏಕಮುಖ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದರು.

ಬೆಂಗಳೂರಿನಿಂದ ಮಂಗಳೂರು ಕಡೆ ಹೋಗುವ ವಾಹನಗಳು ಶಿರಾಡಿ ಘಾಟಿಯ ಈಗಿನ ರಸ್ತೆಯಲ್ಲೇ ಹೋಗಲು ಅವಕಾಶ ನೀಡಲಾಗುವುದು. ಮಂಗಳೂರಿನಿಂದ ಬೆಂಗಳೂರಿನ ಕಡೆಗೆ ಬರುವ ವಾಹನಗಳು ದೋಣಿಗಾಲ್ ಹತ್ತಿರದ ಕಪ್ಪಳ್ಳಿ–ಕೆಸಗಾನ ಹಳ್ಳಿ ಮಾರ್ಗವಾಗಿ ಹಳೆಯ ರಸ್ತೆ ಇದ್ದು ಅದನ್ನು ಬಳಸಬೇಕು. ಈ ರಸ್ತೆಯನ್ನು ತಾತ್ಕಾಲಿಕವಾಗಿ ವಿಸ್ತರಿಸಿ ಪರ್ಯಾಯ ರಸ್ತೆ ಮಾಡಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.

- Advertisement -

 ಸಂಪಾಜೆ ಘಾಟ್ ರಸ್ತೆ ಬಂದ್ ಮಾಡುವ ಅಗತ್ಯ ಇಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ನಮ್ಮ ಇಲಾಖಾ ಪ್ರಧಾನ ಕಾರ್ಯದರ್ಶಿ ಮಡಿಕೇರಿ ಜಿಲ್ಲಾಧಿಕಾರಿಯವರೊಡನೆ ಚರ್ಚೆ ಮಾಡಿದ್ದಾರೆ. ಬಂದ್ ಮಾಡುವಷ್ಟು ಅಗತ್ಯ ಇದೆಯೋ ಇಲ್ಲವೋ ನೋಡಿಕೊಂಡು ತೀರ್ಮಾನ ಮಾಡುತ್ತೇವೆ ಎಂದು ಸಿ.ಸಿ.ಪಾಟೀಲ್ ತಿಳಿಸಿದರು.



Join Whatsapp