ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಹೆಬ್ಬಾವು, ಮೊಸಳೆ, ಕಾಂಗರೂ ಸೇರಿದಂತೆ ಬರೋಬ್ಬರಿ 234 ಪ್ರಾಣಿಗಳ ಜಪ್ತಿ!

Prasthutha|

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೆಬ್ಬಾವು, ಊಸರವಳ್ಳಿ, ಆಮೆ, ಮೊಸಳೆ ಮರಿ ಸೇರಿದಂತೆ ಬರೋಬ್ಬರಿ 234 ಪ್ರಾಣಿಗಳನ್ನು ಜಪ್ತಿ ಮಾಡಲಾಗಿದೆ.

- Advertisement -

ವಿಮಾನದಲ್ಲಿ ಪ್ರಯಾಣ ಮಾಡಿ ಬಂದವನ ಟ್ರ್ಯಾಲಿ ಬ್ಯಾಗ್​​ನಲ್ಲಿ ಪ್ರಾಣಿಗಳು ಪತ್ತೆಯಾಗಿದ್ದು, ಕೆಂಪೇಗೌಡ ಏರ್‌ಪೋರ್ಟ್‌ನ ಕಸ್ಟಮ್ಸ್‌ ಅಧಿಕಾರಿಗಳ ಕಾರ್ಯಾಚರಣೆಯಲ್ಲಿ ಇಂಥದ್ದೊಂದು ಅಪರೂಪದ ವಿದ್ಯಮಾನ ಬೆಳಕಿಗೆ ಬಂದಿದೆ. ಈ ಪ್ರಾಣಿಗಳನ್ನು ವಿದೇಶದಿಂದ ಆಗಮಿಸಿದ್ದ ಪ್ರಯಾಣಿಕರೊಬ್ಬರು ಟ್ರ್ಯಾಲಿ ಬ್ಯಾಗ್‌ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದರು ಎನ್ನಲಾಗಿದೆ.

ಬ್ಯಾಂಕಾಕ್‌ನಿಂದ ‘ಎಫ್‌ಡಿ 137’ ವಿಮಾನದಲ್ಲಿ ಬಂದಿದ್ದ ಪ್ರಯಾಣಿಕ ವಿವಿಧ ಪ್ರಾಣಿಗಳನ್ನು ಟ್ರ್ಯಾಲಿ ಬ್ಯಾಗ್​ನಲ್ಲಿ ಮರೆಮಾಚಿ ಸಾಗಿಸುತ್ತಿದ್ದ. ಈ ವೇಳೆ ಅನುಮಾನಗೊಂಡು ಪರಿಶೀಲನೆ ನಡೆಸಿದಾಗ ಪ್ರಾಣಿಗಳು ಪತ್ತೆಯಾಗಿವೆ. ಆರೋಪಿಯು ಪ್ರಾಣಿಗಳನ್ನು ಬಾಕ್ಸ್‌ಗಳಲ್ಲಿ ತುಂಬಿಕೊಂಡು ದೊಡ್ಡ ಬ್ಯಾಗ್​ನಲ್ಲಿಟ್ಟುಕೊಂಡು ಬಂದಿದ್ದ. ಸದ್ಯ ಕಸ್ಟಮ್ಸ್ ಅಧಿಕಾರಿಗಳು ಪ್ರಾಣಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ವಶಕ್ಕೆ ನೀಡಿದ್ದಾರೆ.

- Advertisement -

ಹೆಚ್ಚಿನ ವಿಚಾರಣೆಗೆ ಆರೋಪಿಯನ್ನು ಕಸ್ಟಮ್ಸ್ ಕಾಯ್ದೆಯ ಸೆಕ್ಷನ್ 104 ರ ಅಡಿಯಲ್ಲಿ ವಶಕ್ಕೆ ಪಡೆದು ತನಿಖೆ ಮುಂದುವರಿಸಲಾಗುತ್ತಿದೆ. ಆರೋಪಿಯು ತಮಿಳುನಾಡು ಮೂಲದ 32 ವರ್ಷ ವಯಸ್ಸಿನ ವ್ಯಕ್ತಿ ಎನ್ನಲಾಗಿದೆ.

ಆರೋಪಿಯ ಬ್ಯಾಗ್​ ಅನ್ನು ತೆರೆದು ನೋಡಿದಾಗ, ಅದರಲ್ಲಿ ಜೀವಂತ ಪ್ರಾಣಿಗಳು ಮತ್ತು ಸರೀಸೃಪಗಳು ಕಂಡುಬಂದವು. ಮರಿ ಕಾಂಗರೊಂದು ಉಸಿರುಗಟ್ಟಿ ಮೃತಪಟ್ಟಿತ್ತು ಎಂದು ಕಸ್ಟಮ್ಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬ್ಯಾಂಕಾಕ್‌ನಲ್ಲಿ ಈ ಬ್ಯಾಗ್ ತನಗೆ ಹಸ್ತಾಂತರಿಸಲ್ಪಟ್ಟಿತ್ತು. ಅದರಲ್ಲಿ ಏನಿತ್ತು ಎಂಬುದು ತನಗೆ ತಿಳಿದಿಲ್ಲ ಎಂದು ಆರೋಪಿಯು ವಿಚಾರಣೆ ವೇಳೆ ಹೇಳಿಕೊಂಡಿದ್ದಾನೆ. ಜತೆಗೆ ಬ್ಯಾಗನ್ನು ಬೆಂಗಳೂರಿಗೆ ಕೊಂಡೊಯ್ಯಲು ತನಗೆ ಅದನ್ನು ಕೊಟ್ಟವರ ಸೂಚನೆ ಇತ್ತು ಎಂದೂ ಹೇಳಿದ್ದಾನೆ. ಆದರೆ, ಆತನ ಹೇಳಿಕೆಗಳ ಬಗ್ಗೆ ತನಿಖಾಧಿಕಾರಿಗಳು ತೃಪ್ತಿಹೊಂದಿಲ್ಲ. ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.



Join Whatsapp