ಕಾಮನ್‌ವೆಲ್ತ್‌ ಗೇಮ್ಸ್‌ | ಪಿವಿ ಸಿಂಧು ಭಾರತದ ಧ್ವಜಧಾರಿ

Prasthutha|

ಅಗ್ರಮಾನ್ಯ ಬ್ಯಾಡ್ಮಿಂಟನ್‌ ಆಟಗಾರ್ತಿ ಪಿವಿ ಸಿಂಧು, ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ತ್ರಿವರ್ಣ ಧ್ವಜಧಾರಿಯ ಗೌರವಕ್ಕೆ ಪಾತ್ರರಾಗಿದ್ದಾರೆ. ಭಾರತೀಯ ಒಲಿಂಪಿಕ್ಸ್‌ ಅಸೋಸಿಯೇಷನ್‌ ಈ ವಿಷಯವನ್ನು ಅಧಿಕೃತವಾಗಿ ಮಂಗಳವಾರ ಸಂಜೆ ಪ್ರಕಟಿಸಿದೆ. 22ನೇ ಆವೃತ್ತಿಯ ಕಾಮನ್‌ವೆಲ್ತ್‌ ಗೇಮ್ಸ್‌ಗೆ ಜುಲೈ 28ರಂದು ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ಚಾಲನೆ ಸಿಗಲಿದೆ.

- Advertisement -

ಅಲೆಕ್ಸಾಂಡರ್ ಸ್ಟೇಡಿಯಂನಲ್ಲಿ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಒಟ್ಟು 164 ಅಥ್ಲೀಟ್‌ಗಳು ಭಾಗವಹಿಸಲಿದ್ದು, ಪಥಸಂಚಲನದಲ್ಲಿ ಪಿವಿ ಸಿಂಧು, ಭಾರತದ ಧ್ವಜ ಹಿಡಿದು ತಂಡವನ್ನು ಮುನ್ನಡೆಸಲಿದ್ದಾರೆ. ಗುರುವಾರದಿಂದ ಆರಂಭವಾಗಲಿರುವ ಕೂಟವು ಆಗಸ್ಟ್‌ 8ರಂದು ಮುಕ್ತಾಯಗೊಳ್ಳಲಿದ್ದು, ಈ ಬಾರಿ 215 ಭಾರತೀಯ ಸ್ಪರ್ಧಿಗಳು ಗೇಮ್ಸ್‌ನ 15 ವಿಭಾಗಗಳಲ್ಲಿ ಸ್ಪರ್ಧಿಸಲಿದ್ದಾರೆ. ಆಸ್ಟ್ರೇಲಿಯದ ಗೋಲ್ಡ್ ಕೋಸ್ಟ್‌ನಲ್ಲಿ 2018ರಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲೂ ಸಿಂಧು, ಭಾರತದ ಧ್ವಜಧಾರಿಯಾಗಿದ್ದರು.

https://twitter.com/OlympicKhel/status/1552291666652168194

ಈ ಹಿಂದೆ, ಟೋಕಿಯೋ ಒಲಿಂಪಿಕ್ಸ್‌ ಪದಕ ವಿಜೇತ ನೀರಜ್‌ ಚೋಪ್ರಾ ಅವರು ಭಾರತ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಘೋಷಿಸಲಾಗಿತ್ತು. ಆದರೆ ತೊಡೆಸಂಧು ಗಾಯದ ಕಾರಣದಿಂದಾಗಿ ಚೋಪ್ರಾ, ಕಾಮನ್‌ವೆಲ್ತ್‌ ಗೇಮ್ಸ್‌ ಕೂಟದಿಂದ ಹಿಂದೆಸರಿದಿದ್ದಾರೆ. ಈ ಹಿನ್ನಲೆಯಲ್ಲಿ ಪಿವಿ ಸಿಂಧು ಅವರಿಗೆ ಅಪೂರ್ವ ಅವಕಾಶ ಒದಗಿಬಂದಿದೆ.

- Advertisement -

ಮಾಜಿ ವಿಶ್ವಚಾಂಪಿಯನ್‌, ಎರಡು ಬಾರಿಯ ಒಲಿಂಪಿಕ್‌ ಪದಕ ವಿಜೇತೆ ಪಿವಿ ಸಿಂಧು, ಗೋಲ್ಡ್ ಕೋಸ್ಟ್ ಮತ್ತು ಗ್ಲಾಸ್ಗೋದಲ್ಲಿ ನಡೆದ ಕಳೆದ ಎರಡು ಕಾಮನ್‌ವೆಲ್ತ್‌ ಕೂಟಗಳಲ್ಲಿ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದು ಮಿಂಚಿದ್ದರು. ಈ ಬಾರಿ ಬರ್ಮಿಂಗ್‌ಹ್ಯಾಮ್‌ನಲ್ಲಿ ಮಹಿಳಾ ಬ್ಯಾಡ್ಮಿಂಟನ್‌ ಸಿಂಗಲ್ಸ್ ವಿಭಾಗದಲ್ಲಿ ಚಿನ್ನದ ಪದಕ ಗೆಲ್ಲುವ ನೆಚ್ಚಿನ ಆಟಗಾರ್ತಿಯಾಗಿದ್ದಾರೆ.



Join Whatsapp