ಲಕ್ಷದ್ವೀಪ ಪ್ರಕ್ಷುಬ್ಧತೆಗೆ ತಳ್ಳಿದ ಫ್ಯಾಶಿಸಂ

Prasthutha|

-ಪಿ.ವಿ.ಸೈದಲವಿ

- Advertisement -

ಲಕ್ಷದ್ವೀಪ ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್ ಅವರ ನೇತೃತ್ವದಲ್ಲಿ ಅಭಿವೃದ್ಧಿ ಹೆಸರಲ್ಲಿ ನಡೆಯುವ ಅನ್ಯಾಯದ ವಿರುದ್ಧ ಲಕ್ಷದ್ವೀಪದಲ್ಲಿ ತೀವ್ರ ಪ್ರತಿಭಟನೆಗಳು ಮುಂದುವರಿಯುತ್ತಿವೆ. ಈ ಪ್ರತಿಭಟನೆಗೆ ದ್ವೀಪದ ಹೊರಗೆ ವಿಶೇಷವಾಗಿ ಕರಾವಳಿ ಪ್ರದೇಶದ ಜನರೂ ಕೈ ಜೋಡಿಸಿದ್ದಾರೆ. ಅದರ ಭಾಗವಾಗಿ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ, ಸಿನೆಮಾ ರಂಗದ ಪ್ರಮುಖರೂ ಪ್ರತಿಕ್ರಿಯೆ ನೀಡಿದ್ದಾರೆ.

ಆದರೆ ಕೇರಳ ಹಾಗೂ ಕರಾವಳಿ ಭಾಗದಲ್ಲಿ ನಡೆಯುವ ಹಲವು ಚರ್ಚೆಗಳು ಲಕ್ಷದ್ವೀಪದ ನೈಜ ಸಮಸ್ಯೆಯ ಹತ್ತಿರ ತಲುಪುವುದಿಲ್ಲ ಎನ್ನುವುದು ಸತ್ಯ. ಲಕ್ಷದ್ವೀಪದಲ್ಲಿ ಬಾರುಗಳು ತೆರೆದದ್ದು, ಗೋಹತ್ಯೆ ನಿಷೇಧಿಸಿದ್ದು, ಅಲ್ಲಿನ ಬಹುಸಂಖ್ಯಾತರ ಭಾವನೆಗಳನ್ನು ಗಣನೆಗೆ ತೆಗೆದುಕೊಳ್ಳದೆ ಕಾನೂನುಗಳನ್ನು ಜಾರಿಗೊಳಿಸುವುದು ಇವುಗಳನ್ನೇ ಪ್ರಮುಖ ಸಮಸ್ಯೆಗಳಾಗಿ ಬಿಂಬಿಸಲಾಗುತ್ತಿವೆ. ಕೆಲವರ ಚರ್ಚೆ ಈ ದಾರಿಯಲ್ಲಿ ಸಾಗಿದರೆ ಇನ್ನು ಕೆಲವರು ಲಕ್ಷದ್ವೀಪದಲ್ಲಿ ಶೇಕಡಾ 99ರಷ್ಟು ಮುಸ್ಲಿಮರಾಗಲು ಕಾರಣಗಳನ್ನು ಹುಡುಕುತ್ತಾ ಇತಿಹಾಸದ ಜಾಡು ಹಿಡಿದು ಸಾಗಿದ್ದಾರೆ. ಇವೆಲ್ಲವುಗಳಿಂದಾಗಿ ಸಾಮಾಜಿಕ ಸೌಹಾರ್ದವು ಇನ್ನಷ್ಟು ಹದೆಗೆಡುತ್ತಿದೆ.

- Advertisement -

ಲಕ್ಷದ್ವೀಪದ ಹೊಸ ಆಡಳಿತ ಸುಧಾರಣೆಯು ಕೇಂದ್ರ ಸರಕಾರ ಮತ್ತು ಕಾರ್ಪೊರೇಟ್‌ ಗಳ ಗೆಳೆತನದ ನಿಲುವಿನ ಫಲವಾಗಿದೆ ಎನ್ನುವುದಾಗಿದೆ ಸತ್ಯ. ಏತನ್ಮಧ್ಯೆ ಕೊರೋನಾ ನಿಯಂತ್ರಣದಲ್ಲುಂಟಾದ ಕೊರತೆಗಳ ಬಗೆಗಿನ ಚರ್ಚೆಗಳೂ ಮಾಯವಾಗುತ್ತಿವೆ. ಆಡಳಿತ ಸುಧಾರಣೆ ತಮ್ಮ ಆರೋಗ್ಯ ಮತ್ತು ಜೀವನೋಪಾಯ ನಷ್ಟವಾಗುವ ಭಯದಿಂದ ಲಕ್ಷದ್ವೀಪದ ಜನರು ಪ್ರತಿಭಟಿಸುತ್ತಿದ್ದಾರೆ ಎಂಬುದು ನಿಜಸ್ಥಿತಿ.

ಲಕ್ಷದ್ವೀಪದ ರೋಗಿಗಳೊಂದಿಗೂ ಪ್ರಫುಲ್ ಕೆ. ಪಾಟೀಲ್ ಎಷ್ಟು ಕ್ರೂರವಾದ ನಿಲುವನ್ನು ಹೊಂದಿದ್ದಾರೆ. ಇದಕ್ಕೆ ಸಾಕ್ಷಿ ಏರ್ ಆಂಬುಲನ್ಸ್ ಅನ್ನು ತಡೆದು ಕಾನೂನು ಜಾರಿಗೊಳಿಸಿರುವುದಾಗಿದೆ. ರೋಗಿಯ ಸ್ಥಿತಿ ಗಂಭೀರವಾಗಿದೆಯೇ ಎಂದು ತೀರ್ಮಾನಿಸುವ ಅಧಿಕಾರವನ್ನು ದ್ವೀಪದ ಮೆಡಿಕಲ್ ಅಧಿಕಾರಿಯಿಂದ ಹಿಂಪಡೆದು ಹೆಲ್ತ್ ಸರ್ವೀಸ್ ಡೈರಕ್ಟರ್ ಚೇರ್ಮೇನ್ ಆಗಿರುವ ನಾಲ್ಕು ಮಂದಿಯನ್ನೊಳಗೊಂಡ ಸಮಿತಿಗೆ ನೀಡಿದೆ. ಈ ಸಮಿತಿಯ ತೀರ್ಮಾನಕ್ಕೆ ಅಡಳಿತಾಧಿಕಾರಿಯ ಅನುಮತಿಯೂ ಪಡೆಯಬೇಕೆಂದು ಕಾನೂನಿನಲ್ಲಿದೆ.

ದ್ವೀಪದಲ್ಲಿ ಚಿಕಿತ್ಸಾ ಸೌಲಭ್ಯಗಳ ಅಭಾವವಿರುವುದರಿಂದ ಮೆಡಿಕಲ್ ಅಧಿಕಾರಿ ತೀರ್ಮಾನಿಸಿದರೆ ಏರ್ ಆಂಬುಲನ್ಸ್ ಮೂಲಕ ತುರ್ತಾಗಿ ರೋಗಿಯನ್ನು ಕೇರಳಕ್ಕೆ ತರಬಹುದಾಗಿತ್ತು. ಈ ವ್ಯವಸ್ಥೆಯನ್ನು ಇದೀಗ ಸಂಕೀರ್ಣ ಕಾನೂನುಗಳ ಮೂಲಕ ಜಟಿಲಗೊಳಿಸಿರುತ್ತಾರೆ.

ಕೊರೋನಾದ ಮೊದಲ ಅಲೆಯ ವೇಳೆ ಒಂದೇ ಒಂದು ಪ್ರಕರಣವೂ ವರದಿಯಾಗಿರಲಿಲ್ಲ. ಆದರೆ ಎರಡನೇ ಅಲೆಯಲ್ಲಿ ರೋಗಿಗಳ ಸಂಖ್ಯೆ ಸಾವಿರದ ಗಡಿ ದಾಟಿದೆ. ರೋಗ ನಿಯಂತ್ರಣ ಕ್ರಮ ಕೈಗೊಳ್ಳುವಲ್ಲಿನ ಕೊರತೆಗಳೂ ಇಲ್ಲಿ ಗಮನಿಸಬೇಕಾಗಿದೆ.

ಬಾರ್‌ ಗಳನ್ನು ತೆರೆಯಬಾರದು, ಗೋಹತ್ಯೆ ಅನುಮತಿಸಬೇಕು, ಬಹುಸಂಖ್ಯಾತರ ಭಾವನೆಗಳನ್ನು ಗೌರವಿಸಬೇಕು ಎಂಬಿತ್ಯಾದಿ ವಿಷಯಗಳನ್ನು ಮುಂದಿಟ್ಟು ಒಂದು ಗುಂಪು ಪ್ರತಿಭಟಿಸಿದರೆ, ಅದರ ವಿರುದ್ಧ ವಾದಗಳೂ ಬರಬಹುದು. ಈ ವಾದಗಳನ್ನು ಮರೆಯಾಗಿಸಿ ಕೇಂದ್ರ ಸರಕಾರ ತನ್ನ ಕಾರ್ಪೊರೇಟ್ ಗೆಳೆಯರೊಂದಿಗೆ ಸೇರಿ ನಡೆಸುವ ಕ್ರಮವನ್ನು ಸುಲಭವಾಗಿ ಮುಂದುವರಿಸಬಹುದು.

ಲಕ್ಷದ್ವೀಪದ ಪ್ರತಿಭಟನೆಯ ಪ್ರಮುಖ ಕಾರಣ ಅಲ್ಲಿನ ಜನರ ಭೂಮಿಯನ್ನು ಸರಕಾರ ಒತ್ತುವರಿ ಮಾಡುವ ರೀತಿಯಲ್ಲಿ ಕಾನೂನುಗಳು ತಂದದ್ದೇ ಆಗಿದೆ. ತಮ್ಮ ಭೂಮಿಯಲ್ಲಿ ಸರಕಾರದಿಂದ ವಿಶೇಷ ಅನುಮತಿ ಪಡೆದು ವಾಸಿಸಬಹುದು ಎಂಬ ಖಾತರಿಯನ್ನು ನೀಡಲಾಗಿದೆ. ಅದೂ ನಿಗದಿತ ಸಮಯದೊಳಗೆ ನವೀಕರಿಸದಿದ್ದಲ್ಲಿ ಮೊದಲ ಹಂತದ ದಂಡ 2 ಲಕ್ಷ ರೂಪಾಯಿ ಪಾವತಿಸಿ ಅನುಮತಿ ನವೀಕರಿಸಬೇಕು. ನಂತರ ದಿನವೊಂದಕ್ಕೆ 20,000 ರೂಪಾಯಿಯಂತೆ ಜುಲ್ಮಾನ ಪಾವತಿಸಬೇಕು. ಅಂದರೆ ಭೂ ತೆರಿಗೆ ಕಟ್ಟದೆ ಇದ್ದಲ್ಲಿ ಭಾರತವಷ್ಟೇ ಅಲ್ಲ ಜಗತ್ತಿನಲ್ಲೆ ಕಟ್ಟಬೇಕಾಗಿ ಬರುವ ಜುಲ್ಮಾನಗಳಲ್ಲಿ ಅತ್ಯಂತ ಗರಿಷ್ಠ ದಂಡ ದ್ವೀಪ ನಿವಾಸಿಗಳು ತೆರಬೇಕು. ಅದೂ ಮೀನುಗಾರಿಕೆಯೇ ಮುಖ್ಯ ಜೀವನೋಪಾಯವಾಗಿರುವ ಜನರು. ತಲೆತಲಾಂತರಗಳಿಂದ ತಾವು ವಾಸಿಸುತ್ತಾ ಬಂದ ಭೂಮಿಯಿಂದ ಶಾಶ್ವತವಾಗಿ ತಮ್ಮನ್ನು ಹೊರದಬ್ಬಲಾಗುತ್ತಿದೆ ಎಂಬ ಕಾರಣಕ್ಕಾಗಿ ದ್ವೀಪ ನಿವಾಸಿಗಳು ಪ್ರತಿಭಟಿಸುತ್ತಿರುವಾಗ ಪ್ರತಿಭಟನೆಗೆ ತಮ್ಮದೇ ಆದ ವ್ಯಾಖ್ಯಾನಗಳನ್ನು ನೀಡಿ ಗೊಂದಲ ಸೃಷ್ಟಿಸುವುದು ಪ್ರತಿಭಟನೆಯನ್ನು ದುರ್ಬಲಗೊಳಿಸಲಷ್ಟೇ ಸಹಾಯಕವಾಗಬಲ್ಲದು. ಶುದ್ಧ ಮನಸ್ಸಿನವರಾದ ದ್ವೀಪ ನಿವಾಸಿಗಳ ಹಕ್ಕುಗಳಿಗಾಗಿ ಕೈಜೋಡಿಸೋಣ. ಪ್ರಫುಲ್ ಪಟೇಲ್ ಮಾಡಿದ ಇನ್ನೊಂದು ಹೊಸ ಕ್ರಮ ಗೂಂಡಾ ಆಕ್ಟ್ ಜಾರಿಗೊಳಿಸಿರುವುದು. ಕೆಲವರು, ಲಕ್ಷ ದ್ವೀಪದಲ್ಲಿನ ಅಪರಾಧ ಸಂಖ್ಯೆ ಶೂನ್ಯವಾಗಿರುವಾಗ ಅಲ್ಲೇಕೆ ಗೂಂಡಾ ಆಕ್ಟ್ ಎಂದು ಕೇಳಿ ಪ್ರತಿಭಟಿಸುತ್ತಾರೆ.

ಲಕ್ಷದ್ವೀಪದಲ್ಲಿ ಅಪರಾಧ ಶೂನ್ಯ ಎನ್ನುವುದು ತಪ್ಪಾದ ಪ್ರಚಾರವಾಗಿದೆ. ಅದೇನೇ ಇರಲಿ, ನಮ್ಮ ವಿಷಯ ಅದಲ್ಲ. ಗೂಂಡಾ ಆಕ್ಟ್ ಜಾರಿಗೊಳಿಸುವುದರ ಹಿಂದೆ ಒಂದು ಅಜೆಂಡಾ ಇದೆ. ನಾವು ಅದನ್ನು ಚರ್ಚಿಸಬೇಕಾಗಿದೆ. ಭೂಮಿ ಒತ್ತುವರಿಯೊಂದಿಗೆ ಗೂಂಡಾ ಆಕ್ಟ್ ತಳುಕು ಹಾಕಿಕೊಂಡಿದೆ ಎಂದು ಅನುಮಾನಿಸಬೇಕಿದೆ. ಹೊಸ ಕಾನೂನು ಪ್ರಕಾರ ದ್ವೀಪದ ಹೊರಗೆ ಕೆಲಸದಲ್ಲಿರುವವರು ಕಾರಣಾಂತರದಿಂದ ತಮ್ಮ ಪರ್ಮಿಟ್ ನವೀಕರಿಸಲು ಸಾಧ್ಯವಾಗದಿದ್ದಲ್ಲಿ ಭೂಮಿ ಪೂರ್ಣವಾಗಿ ನಷ್ಟವಾಗಲಿದೆ. ಈ ರೀತಿ ಭೂಮಿಯನ್ನು ಕಳೆದುಕೊಳ್ಳಬೇಕಾಗಿ ಬರುವಾಗ ಅದರ ವಿರುದ್ಧ ಜನರು ಪ್ರತಿಭಟಿಸುವುದರಲ್ಲಿ ಸಂಶಯವಿಲ್ಲ.

ಸರಕಾರಿ ಹಾಗೂ ಇತರ ರಂಗದಲ್ಲಿ ಕರಾರಿನ ಮೇರೆಗೆ ನೌಕರಿಯಲ್ಲಿದ್ದ ದ್ವೀಪ ನಿವಾಸಿಗಳನ್ನು ನೌಕರಿಯಿಂದ ತೆಗೆದುಹಾಕಲಾಗಿದೆ. ಇದಾಗಿದೆ ದ್ವೀಪದ ಜನರು ಪ್ರತಿಭಟನೆಗೆ ಮುಂದಾದ ಇನ್ನೊಂದು ಪ್ರಮುಖ ವಿಷಯ. ದ್ವೀಪ ನಿವಾಸಿಗಳ ಜೀವನಾಧಾರವಾಗಿದ್ದ ಚಿಕ್ಕಪುಟ್ಟ ನೌಕರಿಗಳು, ಕಾಂಟ್ರಾಕ್ಟ್ ಗಳು, ಮುಖ್ಯ ಜೀವನಾಧಾರವಾದ ಮೀನುಗಾರಿಕೆ ಇವೆಲ್ಲವುಗಳನ್ನೂ ಕೋಟ್ಯಂತರ ರೂ.ಗಳ ಭಾರೀ ಪ್ರಾಜೆಕ್ಟ್‌ ಗಳಾಗಿ ಪರಿವರ್ತಿಸಿ ಕಾರ್ಪೊರೇಟ್ ಕುಳಗಳಿಗೆ ವಿತರಿಸುವ ಕ್ರಮವನ್ನು ನಾವು ಗಮನಿಸಬೇಕಿದೆ.

 ಲಕ್ಷದ್ವೀಪದ ಅಭಿವೃದ್ಧಿ ಕೆಲಸದಲ್ಲಿ ತಮ್ಮ ಪಾತ್ರವನ್ನು ನಿರ್ವಹಿಸಿ ಆ ಮೂಲಕ ತಮ್ಮ ಜೀವನೋಪಾಯವನ್ನು ಕಂಡುಕೊಳ್ಳುತ್ತಿದ್ದ ದ್ವೀಪ ನಿವಾಸಿಗಳಿಂದ ಅವರ ಈ ಹಕ್ಕನ್ನು ಕಸಿದು ಬಿಜೆಪಿ ಸರಕಾರ ತನ್ನ ಕಾರ್ಪೊರೇಟ್ ಗೆಳೆಯರಿಗೆ ಅನ್ಯಾಯವಾಗಿ ವಿತರಿಸಲು ಹೊರಟಿದೆ. ಜೀವನೋಪಾಯ ಕೈತಪ್ಪಿ ಹಸಿವು ಎದುರಿಸಬೇಕಾಗಿ ಬಂದಾಗ ಸ್ವತಃ ಜನರೇ ದ್ವೀಪ ತೊರೆಯಬಹುದೆಂಬ ಲೆಕ್ಕಾಚಾರವೂ ಇದರ ಹಿಂದಿದೆ.

ಜೀವಿಸಲಿರುವ ಹಕ್ಕು ದೇಶದ ಸಂವಿಧಾನ ಕೊಡಮಾಡುವ ಪೌರ ಹಕ್ಕಾಗಿದೆ. ಈ ಹಕ್ಕಿನ ಮೇಲಿನ ಸವಾರಿಯಾಗಿದೆ ಎಂದು ನಾವು ಎತ್ತಿ ತೋರಿಸಬೇಕಿದೆ.

 ಧ್ವಂಸಗೊಳಿಸುವುದನ್ನು ನಿಲ್ಲಿಸಬೇಕೆಂದು ಉಚ್ಛ ನ್ಯಾಯಾಲಯ ನಿರ್ದೇಶಿಸಿದ ಹೊರತಾಗಿಯೂ ಸರಕಾರ ಕೆಡಹುವ ಕೆಲಸವನ್ನು ಮುಂದುವರಿಸುತ್ತಲೇ ಇತ್ತು. ಈ ರೀತಿಯ ಆಡಳಿತ ಭಯೋತ್ಪಾದನೆಯನ್ನು ಮುಚ್ಚಿಡ ಲು ಸರಕಾರ ಸಾಮಾಜಿಕ ತಾಣಗಳನ್ನು ಬ್ಲಾಕ್ ಮಾಡಿತು ಮತ್ತು ಅಂತರ್ಜಾಲವನ್ನು ಸ್ಥಗಿತಗೊಳಿಸಿತು.

ದ್ವೀಪ ನಿವಾಸಿಗಳಿಗೆ ದ್ವೀಪವೇ ನೀಡಬೇಕೆಂದು ಹೇಳಿದರೆ ಲಕ್ಷದ್ವೀಪದಲ್ಲಿ ಜನವಾಸವಿಲ್ಲದ, ಕರೆಂಟ್ ದೀಪ ಯಾವುದೂ ಇಲ್ಲದ ಸುಮಾರು 26 ದ್ವೀಪಗಳಿವೆ. ಅವುಗಳಲ್ಲಿ ಯಾವುದನ್ನಾದರೂ ಅವರಿಗೆ ವಾಸಿಸಲು ಬಿಟ್ಟುಕೊಡಬಹುದಷ್ಟೆ. ತಮ್ಮ ಅಸ್ತಿತ್ವ ಮತ್ತು ಮಾನವ ಹಕ್ಕುಗಳಿಗಾಗಿ ಹೋರಾಡುವ ಲಕ್ಷದ್ವೀಪದ ಜನರೊಂದಿಗೆ ಕೈಜೋಡಿಸಬೇಕಾದುದು ಮಾನವೀಯತೆ ಇನ್ನೂ ಬತ್ತಿ ಹೋಗದ ಪ್ರತಿಯೋರ್ವ ಪೌರನ ಕರ್ತವ್ಯವಾಗಿದೆ.

Join Whatsapp