ಪುತ್ತೂರು : ಧರ್ಮಸ್ಥಳ ಮೇಳದ ಹಿರಿಯ ಕಲಾವಿದ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ‘ಶತ ದಿಗಿಣ ಧೀರ’ ಖ್ಯಾತಿಯ ಡಾ. ಶ್ರೀಧರ ಭಂಡಾರಿ ಪುತ್ತೂರು ನಿಧನರಾಗಿದ್ದಾರೆ. ಯಕ್ಷರಂಗದ ಸಿಡಿಲಮರಿ ಎಂದೇ ಖ್ಯಾತರಾಗಿದ್ದ ಶ್ರೀಧರ ಭಂಡಾರಿ ಅವರಿಗೆ 73 ವರ್ಷ ವಯಸ್ಸಾಗಿತ್ತು. ಇತ್ತೀಚೆಗೆ ಅವರಿಗೆ ಕಾಲುನೋವು ಕಾಡಿತ್ತು.
ತಂದೆ ಸಂಘಟಕ, ಕಲಾವಿದ ದಿ. ಪುತ್ತೂರು ಶೀನಪ್ಪ ಭಂಡಾರಿ ಅವರಿಂದ ಯಕ್ಷಗಾನ ಅಭ್ಯಸಿಸಿದ್ದ ಶ್ರೀಧರ ಭಂಡಾರಿ ಸಂಘಟಕರೂ ಆಗಿದ್ದರು. ಸುಬ್ರಹ್ಮಣ್ಯ ಮೇಳ, ಪುತ್ತೂರು ಮೇಳಗಳನ್ನೂ ನಡೆಸಿದ್ದರು.
ಅಭಿಮನ್ಯು, ಬಭ್ರುವಾಹನ, ಕೃಷ್ಣ, ಭಾರ್ಗವ ಸೇರಿದಂತೆ ಹಲವು ಪಾತ್ರಗಳು ಅವರಿಗೆ ಹೆಸರು ತಂದುಕೊಟ್ಟಿದ್ದವು. ಲಂಡನ್, ಜಪಾನ್, ಅಮೇರಿಕಾ, ದುಬೈ, ಬೆಹರೀನ್ ಸೇರಿದಂತೆ ಹಲವು ವಿದೇಶಗಳಲ್ಲಿಯೂ ಅವರು ಯಕ್ಷಗಾನ ಪ್ರದರ್ಶನ ನೀಡಿದ್ದರು.
ಶ್ರೀಧರ ಭಂಡಾರಿ ಅವರ ನಿಧನಕ್ಕೆ ಅವರ ಅಭಿಮಾನಿಗಳಿಂದ, ಯಕ್ಷಗಾನ ಪ್ರಿಯರಿಂದ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಸಂತಾಪ ವ್ಯಕ್ತವಾಗಿದೆ.