ಪುತ್ತೂರು: ಅಡಿಕೆ ಕಳ್ಳತನ ಪ್ರಕರಣದಲ್ಲಿ ನಾಲ್ವರ ಬಂಧನ

Prasthutha|

- Advertisement -

ಪುತ್ತೂರು: ಬಡಗನ್ನೂರು ಗ್ರಾಮದ ಕೊಯ್ಲದಲ್ಲಿ ಅಡಿಕೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಡಗನ್ನೂರಿನ ಕೊಯ್ಲ ಮನೆ ಶ್ರವಣ್ ಕೆ(20) , ಬಾಣಪದವು ಜಯಚಂದ್ರ (21), ನಿಡ್ಪಳ್ಳಿ ಡೊಬ್ಬಟ್ಟಗಿರಿಯ ಅಶೋಕ (24), ನಿಡ್ಪಳ್ಳಿ ಕಲ್ಲಮೂಲೆಯ ಪುನೀತ್‌ (20) ಬಂಧಿತರು.

ವಾರದ ಹಿಂದೆ ಬಡಗನ್ನೂರು ಗ್ರಾಮದ ಕೊಯ್ಲ ಎಂಬಲ್ಲಿರುವ ನವೀನ್‌ ಕುಮಾರ್‌ ರೈ ಅವರಿಗೆ ಸೇರಿದ ಹಳೆ ಮನೆಯ ಕೊಟ್ಟಿಗೆಯ ಅಟ್ಟದಲ್ಲಿ ಎನ್‌ ಕೆ ಆರ್‌ ಎಂದು ಮಾರ್ಕ್‌ ಮಾಡಿ ಇಟ್ಟಿದ್ದ ಸುಮಾರು 23 ಗೋಣಿ ಸುಲಿಯದ ಅಡಿಕೆಯನ್ನು ಕಳವು ಮಾಡಲಾಗಿದ್ದು, ಈ ಕುರಿತು ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

- Advertisement -

ಬಂಧಿತರಿಂದ 1,55,925/ರೂ. ಮೌಲ್ಯದ ಅಡಿಕೆ ಕಳವು ಮಾಡಲು ಉಪಯೋಗಿಸಿದ ಸ್ವಿಪ್ಟ್‌ ಕಾರು, ಮತ್ತು ಆಟೋ ರಿಕ್ಷಾ ಸೇರಿದಂತೆ ಒಟ್ಟು 4,15,925 ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಡಗನ್ನೂರು ಗ್ರಾಮದಲ್ಲಿ ಕಳೆದ ಕೆಲ ಸಮಯಗಳಿಂದ ದರೋಡೆ, ಕಳ್ಳತನ ಪ್ರಕರಣ ಪದೇ ಪದೇ ಸಂಭವಿಸುತ್ತಿದ್ದು ಜನರು ಪೊಲೀಸ್ ಕಾರ್ಯವೈಖರಿ ಬಗ್ಗೆ ಅಸನಾಧಾನಗೊಂಡಿದ್ದರು.

Join Whatsapp