ಪುತ್ತೂರು: ಡಾ. ಆಯಿಷಾ ನಿಶಾದ್ ರನ್ನು ಸನ್ಮಾನಿಸಿ ಅಭಿನಂದಿಸಿದ ಸಾಧಕಿ ಮಹಿಳೆಯರು

Prasthutha|

ಪುತ್ತೂರು: ಇಲ್ಲಿನ ಮುರಾ ನಿವಾಸಿ, ಎಂಪಿಎಂ ಶಿಕ್ಷಣ ಸಂಸ್ಥೆಯ ಸ್ಥಾಪಕ ನ್ಯಾಯವಾದಿ ಎಂಪಿ ಅಬುಬಕ್ಕರ್ ರವರ ಪುತ್ರಿ ಡಾ.ಆಯಿಷಾ ನಿಶಾದ್ ರವರು, ವಿಜಯಪುರ ಅಲ್ ಅಮೀನ್ ಕಾಲೇಜಿನಲ್ಲಿ ಎಂ.ಡಿ. ಅಂತಿಮ ಪರೀಕ್ಷೆಯಲ್ಲಿ ಕಾಲೇಜಿಗೆ ಟಾಪರ್ ಆಗಿ ಅತ್ಯುತ್ತಮ ಶ್ರೇಣಿಯಲ್ಲಿ ವೈದ್ಯಕೀಯ ಪದವಿ ಪಡೆದುಕೊಂಡಿದ್ದಾರೆ. 

- Advertisement -

ರಾಜೀವ್ ಗಾಂಧಿ ಯುನಿವರ್ಸಿಟಿಯ ವಿದ್ಯಾರ್ಥಿ ಆಗಿರುವ ಇವರ ಸಾಧನೆಯನ್ನು ಗುರುತಿಸಿ ಪುತ್ತೂರು ಕಮ್ಯೂನಿಟಿ ಸೆಂಟರ್ ಮೂಲಕ ಸನ್ಮಾನಿಸಿ ಗೌರವಿಸಲಾಯಿತು. ವಿಶೇಷವಾಗಿ ಪುತ್ತೂರು ತಾಲೂಕಿನಲ್ಲಿ ವಿವಿಧ ಕ್ಷೇತ್ರದಲ್ಲಿ ವೃತ್ತಿ ಮಾಡುತ್ತಿರುವ ಮುಸ್ಲಿಂ ಸಾಧಕಿಯರಿಂದಲೇ ಡಾ. ನಿಶಾದ್ ರವರನ್ನು ಸನ್ಮಾನಿಸಿ ಗೌರವಿಸಲಾಯಿತು. ಡಾ. ನಿಶಾದ್ ರವರು ಕಲಿತಿರುವ ಶಾಲೆಯಾದ ಸುಧಾನದ ಆಡಳಿತ ಸಮಿತಿಯ  ಅಸ್ಕರ್ ಆನಂದ್  ರವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾಧಕಿ ನಿಶಾದ್ ರನ್ನು ಅಭಿನಂದಿಸಿದರು.

ಪ್ರಾಥಮಿಕ ಆರೋಗ್ಯ ಕೇಂದ್ರ ಪುತ್ತೂರು ಇಲ್ಲಿನ ಆರೋಗ್ಯ ಅಧಿಕಾರಿ ಆಗಿರುವ ಡಾ. ಸುಹೈಲಾ,  ಕಲ್ಲಡ್ಕದ ದಂತ ವೈದ್ಯೆ ಡಾ ಮುಫೀದ ಸಜೀಪ,  ಅಡ್ವಕೇಟ್ ಝುಬೈದಾ ಸರಳಿಕಟ್ಟೆ,  ಅಡ್ವಕೇಟ್ ರಮ್ಲತ್ ರವರು ಪುತ್ತೂರಿನ ಸಾಧಕಿ ಯುವತಿ ಡಾ. ಆಯಿಷಾ ನಿಶಾದ್ ರನ್ನು ಸನ್ಮಾನಿಸಿದರು.

- Advertisement -

ಈ ಸಂದರ್ಭದಲ್ಲಿ ಮಾತನಾಡಿದ  ಅಸ್ಕರ್ ಆನಂದ್ ರವರು, ಪುತ್ತೂರು ಕಮ್ಯೂನಿಟಿ ಸೆಂಟರ್ ನ ಕಾರ್ಯಾಚರಣೆ ಶ್ಲಾಘನೀಯ, ಇಂತಹ ಸೆಂಟರ್ ದೇಶದ ಭವಿಷ್ಯದ ತಲೆಮಾರಿಗೆ ಮಾರ್ಗದರ್ಶನ ಮತ್ತು ಸಹಕಾರ ನೀಡುವುದು ಅಭಿನಂದನಾರ್ಹ ಎಂದರು. ಸಾಧಕಿ ಡಾ. ನಿಶಾದ್ ರವರು ಮಾತನಾಡುತ್ತಾ, ನನಗೆ ಸನ್ಮಾನಿಸಿದ ಸಾಧಕಿ ಮುಸ್ಲಿಂ ಯುವತಿಯರ ಕಥೆ ಕೇಳಿದಾಗ ನನ್ನ ಸಾಧನೆ ಸಣ್ಣದು ಎನಿಸುತ್ತದೆ. ನನಗೆ ಹೆತ್ತವರ ಸಹಕಾರ ಇತ್ತು, ಆರ್ಥಿಕ ಸಾಮರ್ಥ್ಯ ಇತ್ತು. ಹೀಗಾಗಿ ನನ್ನ ಕಲಿಕೆಗೆ ಯಾವುದೇ ತಡೆ ಮತ್ತು ಆತಂಕ ಇರಲಿಲ್ಲ. ಆದರೆ, ನನಗೆ ಸನ್ಮಾನಿಸಿದ ಯುವತಿಯರ ಬದುಕಿನಲ್ಲಿ, ನನ್ನನ್ನೂ ಭವಿಷ್ಯದಲ್ಲಿ ಸಮಾಜ ಸೇವೆಯಲ್ಲಿ ತೊಡಗಿಸಿ ಕೊಳ್ಳುವ ಸ್ಪೂರ್ತಿಯ ಕಥೆಗಳಿವೆ ಎಂದರು. ಕಮ್ಯೂನಿಟಿ ಸೆಂಟರ್ ನ ಕಾರ್ಯಾಚರಣೆಯಲ್ಲಿ ನಾನು ಸಂಪೂರ್ಣವಾಗಿ ತೊಡಗಿಸಿ ಕೊಳ್ಳುತ್ತೇನೆ ಎಂದರು.

ಡಾ. ಸುಹೈಲಾ ರು ಮಾತನಾಡುತ್ತಾ, ನಾನು ಸ್ಕಾಲರ್ ಶಿಪ್ ಮೂಲಕ ಕಲಿತವಳು. ಕಲಿಯುವ ಸಂದರ್ಭ ಸಮುದಾಯದ ಸಹಕಾರ ಸಂಪೂರ್ಣ ಸಿಕ್ಕಿದೆ. ಅದೇ ನನ್ನ ಸಾಧನೆಗೆ ಕಾರಣ.  ನನ್ನ ಯಶಸ್ಸಿನ ಪ್ರಯಾಣ ಬಹಳ ಸಂಕಷ್ಟ ಮತ್ತು ಕ್ಲಿಷ್ಠಕರವಾಗಿತ್ತು. ಇವತ್ತಿಗೂ ನಾನು ಸವಾಲು ಎದುರಿಸುತ್ತಿದ್ದೇನೆ. ಅದಕ್ಕೆ ಸಮುದಾಯ ದೈರ್ಯ ತುಂಬುವ ಕೆಲಸ ಮಾಡಬೇಕು ಎಂದರು. ಅಡ್ವಕೇಟ್ ರಮ್ಲತ್ ಮಾತನಾಡುತ್ತಾ, ನಾನು ಹರಿದ ಚಪ್ಪಲಿ ಹಾಕಿ ಶಾಲೆಗೆ ಹೋಗುತ್ತಿದ್ದೆ. ಹೊಟ್ಟೆಯ ಹಸಿವಿನ ಜೊತೆ ಜ್ಞಾನ ಸಂಪಾದನೆಯ ಹಸಿವು ಇತ್ತು. ನನಗೆ ಸಮುದಾಯದ ಸಹಕಾರ ಸಿಕ್ಕಿದೆ. ಸಂಘ ಸಂಸ್ಥೆಗಳ ಸಹಾಯ ಸಿಕ್ಕಿದೆ. ಅದೇ ನನ್ನನ್ನು ಈ ಸ್ಥಾನಕ್ಕೆ ತಂದಿದೆ ಎಂದರು. ಅಡ್ವಕೇಟ್ ಝುಬೈದಾ ಸರಳಿಕಟ್ಟೆಯವರು ಮಾತನಾಡುತ್ತಾ, ಶಿಕ್ಷಕಿಯ ಪಧವಿ ಪಡೆದ ನಾನು, ಲಾಯರ್ ಆಗುವ ಕನಸನ್ನು ಪತಿಯಲ್ಲಿ ಹೇಳಿದೆ. ಅವರ ಸಹಕಾರ, ಪ್ರೋತ್ಸಾಹದಿಂದ ನಾನು ಲಾಯರ್ ಆಗಿದ್ದೇನೆ. ನನಗೆ ಮುಸ್ಲಿಂ ಮಹಿಳಾ ಸಮಾಜದ ಸಮಸ್ಯೆಗಳ ಕುರಿತಂತೆ ಆತಂಕ ಇದೆ. ಅದನ್ನು ನಿವಾರಿಸಲು ಕಮ್ಯೂನಿಟಿ ಸೆಂಟರ್ ನಮ್ಮೊಂದಿಗೆ ಕೈ ಜೋಡಿಸಬೇಕು ಎಂದರು. ಡಾ. ಮುಫೀದಾ ಮಾತನಾಡುತ್ತಾ, ಮನೆಯವರ ಪ್ರೋತ್ಸಾಹದಿಂದ ಈ ಸಾಧನೆ ಮಾಡಿದ್ದೇನೆ ಎಂದರು.

ಕಾರ್ಯಕ್ರಮದಲ್ಲಿ ಡಾ. ಆಯಿಷಾ ನಿಶಾದ್ ರವರ ತಂದೆಯವಾರದ ಅಡ್ವಕೇಟ್ ಎಂಪಿ ಅಬುಬಕ್ಕರ್ ಅವರನ್ನೂ ಸನ್ಮಾನಿಸಲಾಯಿತು. ಈ ಸನ್ಮಾನವನ್ನು ಮಗಳ ಕೈಯಿಂದಲೇ ನೆರವೇರಿಸಲಾಯಿತು. ತನ್ನ ಮೂವರು ಯುವತಿಯರನ್ನು ವೈದ್ಯರನ್ನಾಗಿ ಮಾಡಿದ, ಗಂಡು ಮಕ್ಕಳಿಬ್ಬರನ್ನೂ ವೃತ್ತಿಪರ ಪಧವಿಯಲ್ಲಿ ಸೇರಿಸಿದ ಶಿಕ್ಷಣ ಪ್ರೇಮಿ ಅಬುಬಕ್ಕರ್ ಅವರು ಮಾತನಾಡುತ್ತಾ, ನನಗೆ ವೈದ್ಯನಾಗುವ ಆಸೆ ಇತ್ತು. ನನ್ನಿಂದ ಸಾಧ್ಯ ಇರದ ಆಸೆ ಮಕ್ಕಳು ನೆರವೇರಿಸಿದರು. ನನಗೆ ಪ್ರಾಂಶುಪಾಲನಾಗುವ ಕನಸು ಇತ್ತು ಶಿಕ್ಷಣ ಸಂಸ್ಥೆ ನಿರ್ಮಿಸಿ ಪ್ರಾಂಶುಪಾಲನಾದೆ. ಲಾಯರ್ ಆಗಿರುವುದು ನನ್ನ ಇಚ್ಚಾಶಕ್ತಿಯ ಪ್ರಯತ್ನ. ಸಾಧಿಸುವವರಿಗೆ ಅವಕಾಶ ಮತ್ತು ಸಹಕರಿಸುವ ಕೈಗಳಿವೆ ಹಾಗಾಗಿ ಎಲ್ಲರೂ ಸಾಧಕರಾಗಬಹುದು ಎಂದರು.

ಕಾರ್ಯಕ್ರಮವನ್ನು ಕಮ್ಯೂನಿಟಿ ಸೆಂಟರ್ ನ ಮುಖ್ಯಸ್ಥರಾದ ಹನೀಫ್ ಪುತ್ತೂರು ನೆರವೇರಿಸಿದರು.  ಇಮ್ತಿಯಾಝ್ ಪಾರ್ಲೆ, ನಝೀರ್, ಕಾನೂನು ವಿದ್ಯಾರ್ಥಿ ಎಸ್ ಜಿ ಅಫ್ರಿಝ್, ನವಾಝ್, ಕೆ.ಪಿ ಅಮೀನ್, ಮುಝಮ್ಮಿಲ್ ಉಪಸ್ಥಿತರಿದ್ದರು.

Join Whatsapp