ಉತ್ತರಾಖಂಡ: ಚುನಾವಣೆಯಲ್ಲಿ ಸೋತ ಪುಷ್ಕರ್ ಧಾಮಿ ಮತ್ತೆ ಮುಖ್ಯಮಂತ್ರಿ

Prasthutha|

ಡೆಹ್ರಾಡೂನ್: ಚುನಾವಣೆಯಲ್ಲಿ ಸೋತಿದ್ದರೂ ಉತ್ತರಾಖಂಡದ ನೂತನ ಮುಖ್ಯಮಂತ್ರಿಯಾಗಿ ಪುಷ್ಕರ್ ಸಿಂಗ್ ಧಾಮಿ ಅವರು ಮುಂದುವರಿಯಲಿದ್ದಾರೆ. ಇಂದು ಡೆಹ್ರಾಡೂನ್ ನಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಪುಷ್ಕರ್ ಸಿಂಗ್ ಧಾಮಿ ಅವರನ್ನು ಬಿಜೆಪಿ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆ ಮಾಡಲಾಗಿದೆ.

- Advertisement -

ಪಂಚರಾಜ್ಯಗಳ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳನ್ನು ಗೆದ್ದುಕೊಂಡಿರುವ ಬಿಜೆಪಿ, ಉತ್ತರಾಖಂಡದಲ್ಲೂ ಮರಳಿ ಅಧಿಕಾರ ಪಡೆದಿದೆ. ಮುಖ್ಯಮಂತ್ರಿ ಆಗಿದ್ದ ಪುಷ್ಕರ್ ಸಿಂಗ್ ಧಾಮಿ ಅವರು ಚುನಾವಣೆಯಲ್ಲಿ ಖತಿಮಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲನುಭವಿಸಿದ್ದರು. ಹೀಗಾಗಿ ಧಾಮಿ ಅವರನ್ನು ಮತ್ತೆ ಮುಖ್ಯಮಂತ್ರಿ ಮಾಡುವುದು ಅನುಮಾನ ಎನ್ನಲಾಗುತ್ತಿತ್ತು.

ಈ ಮಧ್ಯೆ ಕೇಂದ್ರ ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ನೇತೃತ್ವದಲ್ಲಿ ನಡೆದ ಬಿಜೆಪಿ ಶಾಸಕಾಂಗ ಸಭೆಯಲ್ಲಿ ಪುಷ್ಕರ್ ಸಿಂಗ್ ಧಾಮಿ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಿ ಮತ್ತೊಮ್ಮೆ ಮುಖ್ಯಮಂತ್ರಿ ಪಟ್ಟ ನೀಡಲಾಗಿದೆ. ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾದ ಬೆನ್ನಲ್ಲೇ ಧಾಮಿ ಅವರು ನೂತನ ಸರ್ಕಾರದ ರಚನೆಗೆ ಅವಕಾಶ ಕೋರಿ ರಾಜ್ಯಪಾಲರ ಬಳಿ ಹಕ್ಕು ಮಂಡಿಸಿದ್ದಾರೆ.

- Advertisement -

ನಿನ್ನೆಯಷ್ಟೇ ಪ್ರಧಾನಿ ಮೋದಿ ನೇತೃತ್ವದಲ್ಲಿ ಉತ್ತರಾಖಂಡ ಸಿಎಂ ಆಯ್ಕೆ ಸಂಬಂಧ ಬಿಜೆಪಿ ಉನ್ನತ ಮಟ್ಟದ ಸಭೆ ನಡೆದಿತ್ತು. ದೆಹಲಿ ಸಭೆಯ ಸೂಚನೆಯಂತೆ ಧಾಮಿ ಅವರು ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.

ಖತಿಮಾ ಕ್ಷೇತ್ರದಿಂದ ಸ್ಪರ್ಧಿಸಿದ ಪುಷ್ಕರಿ ಧಾಮಿ ಸೋತಿದ್ದ ಅವರನ್ನು ಎರಡನೇ ಅವಧಿಗೆ ಪಕ್ಷವನ್ನು ಅಧಿಕಾರಕ್ಕೇರಿಸಲು ಪ್ರಮುಖ ಪಾತ್ರ ವಹಿಸಿದ್ದನ್ನು ಪರಿಗಣಿಸಿ ಬಿಜೆಪಿ ಪಕ್ಷವು ಮತ್ತೆ ಮುಖ್ಯಮಂತ್ರಿಯಾಗಿ ಮುಂದುವರಿಯಲು ಅವಕಾಶ ನೀಡಿದೆ ಎಂದು ಹೇಳಲಾಗಿದೆ.

ಹಿರಿಯ ಬಿಜೆಪಿ ಮುಖಂಡರುಗಳಾದ ಮಾಜಿ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್, ಕೇಂದ್ರ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಮತ್ತು ಹಿರಿಯ ನಾಯಕ ಸತ್ಪಾಲ್ ಮಹಾರಾಜ್ ಸೇರಿದಂತೆ ಪುಷ್ಕರ್ ಸಿಂಗ್ ಧಾಮಿ ಮುಖ್ಯಮಂತ್ರಿ ರೇಸ್ ನಲ್ಲಿ ಮುಂಚೂಣಿಯಲ್ಲಿದ್ದರು.

ಇದರ ಹೊರತಾಗಿಯೂ ಧಾಮಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ಸೈದ್ಧಾಂತಿಕ ಮಾರ್ಗದರ್ಶಕವಾದ ಆರೆಸ್ಸೆಸ್ ಸಂಘಟನೆಯು ಬೆನ್ನೆಲುಬಾಗಿ ನಿಂತಿತ್ತು ಎಂದು ಮೂಲಗಳು ತಿಳಿಸಿವೆ.



Join Whatsapp