ಬೆಂಗಳೂರು: ಬೊಮ್ಮಾಯಿಯವರ ಆಡಳಿತದಲ್ಲಿ ‘ಆಕ್ಷನ್’ ಇಲ್ಲದಕ್ಕೆ ಸಿಎಂ ಬದಲಾವಣೆಯ ‘ರಿಯಾಕ್ಷನ್’ ಸೃಷ್ಟಿಯಾಗಿದೆ! ಪ್ರವೀಣ್ ಹತ್ಯೆ, ಕಾರ್ಯಕರ್ತರ ರಾಜೀನಾಮೆ, ಬಲಪಂತೀಯ ಸಂಘಟನೆಗಳ ಆಕ್ರೋಶ, ಗೃಹಸಚಿವರ ಮನೆ ಮೇಲೆ ದಾಳಿ, ಎಲ್ಲವೂ ಬಿಜೆಪಿ ಒಳಗಿನ ಅತೃಪ್ತ ಆತ್ಮಗಳ ಕುರ್ಚಿ ಕಸಿಯುವ ಪೂರ್ವನಿಯೋಜಿತ ಕೃತ್ಯಗಳಾಗಿರಬಹುದೇ ಬೊಮ್ಮಾಯಿಯವರೇ ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಕರ್ನಾಟಕ ಕಾಂಗ್ರೆಸ್ ಟ್ವಿಟ್ಟರ್ ಪೇಜ್ ನಲ್ಲಿ ಸರಣಿ ಟ್ವೀಟ್ ಮಾಡಲಾಗಿದ್ದು, ಸಿದ್ದರಾಮಯ್ಯನವರ ಅಮೃತ ಮಹೋತ್ಸವದಲ್ಲಿ ಕಾಂಗ್ರೆಸ್‌ಗೆ ಸಿಕ್ಕ ಅಭೂತಪೂರ್ವ ಜನಬೆಂಬಲ, ಕಾಂಗ್ರೆಸ್ ಆಯೋಜಿಸಿರುವ ಫ್ರೀಡಂ ಮಾರ್ಚ್ ಗೆ ಸಿಗುತ್ತಿರುವ ಅಪರಿಮಿತ ಯಶಸ್ಸನ್ನು ಕಂಡ ಬಿಜೆಪಿ ಕಂಗಾಲಾಗಿ ಹೋಗಿದೆ. ಚುನಾವಣೆಗೆ ಹೋಗಲು ಮುಖವಿಲ್ಲದ ಕಾರಣ ಸಿಎಂ ಕುರ್ಚಿಯಲ್ಲಿ ಬೇರೆ #PuppetCM ಕೂರಿಸಲು ಕಸರತ್ತು ನಡೆಸುತ್ತಿದೆ ಎಂದು ವ್ಯಂಗ್ಯವಾಡಿದೆ.
ರಾಜ್ಯಕ್ಕೆ ಸಂಕಟ, ಬಿಜೆಪಿಗೆ ಅಧಿಕಾರದಾಟ. ಅತಿವೃಷ್ಟಿಯಿಂದ ಜನತೆ ಪರದಾಡುತ್ತಿರುವಾಗ ಸಮರೋಪಾದಿಯಲ್ಲಿ ನೆರವಿನ ಕಾರ್ಯ ಮಾಡುವುದನ್ನು ಬಿಟ್ಟು ಬಿಜೆಪಿ ಪಕ್ಷ 3ನೇ ಸಿಎಂ ಪ್ರತಿಷ್ಠಾಪನೆಗೆ ಕಸರತ್ತು ನಡೆಸುತ್ತಿದೆ. ರಾಜ್ಯ ಸಂಕಷ್ಟಕ್ಕೆ ಎದುರಾದಾಗಲೆಲ್ಲ ಬಿಜೆಪಿ ರಾಜಕೀಯದಾಟಕ್ಕೆ ಚಾಲನೆ ಕೊಡುತ್ತದೆ ಎಂದು ಹೇಳಿದೆ.
ಬೊಮ್ಮಾಯಿಯವರೇ, ಸಿಎಂ ಹುದ್ದೆಗೆ ‘ಕತ್ತಿ ವರಸೆ’ ಶುರುವಾಗಿದೆ ಎಂದರೆ ನೀವು ಕುರ್ಚಿಯಿಂದ ಇಳಿಯಲು ದಿನಗಳನ್ನಲ್ಲ, ಗಂಟೆಗಳನ್ನು ಎಣಿಸುತ್ತಿದ್ದೀರಿ ಎನಿಸುತ್ತಿದೆ! ಬೊಮ್ಮಾಯಿ ಅವರೇ, ಸಿಎಂ ಬದಲಾವಣೆ ಎಂಬ ಬೆಳವಣಿಗೆಗೆ ಕಾರಣವೇನು, ನಿಮ್ಮ ಆಡಳಿತ ವೈಫಲ್ಯವೇ? ಅಥವಾ #BJPvsBJP ಕಾದಾಟವೇ? ಅಥವಾ ಯಡಿಯೂರಪ್ಪನವರ ಕೋಪವೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಎಷ್ಟು ಪ್ರಯತ್ನಿಸಿದರೂ ಜನತಾ ಪರಿವಾರಿಯಾಗಿದ್ದ ಬೊಮ್ಮಾಯಿ ಅವರನ್ನು ಕೇಶವ ಕೃಪಾದವರು ‘ಸಂಘಪರಿವಾರಿ’ಯಾಗಿ ಸ್ವೀಕರಿಸಲು ಒಪ್ಪಲೇ ಇಲ್ಲ! ಆಡಿಸಿ ನೋಡು ಎಂದು ಗೊಂಬೆಯಂತಿದ್ದ #PuppetCM ಬೊಮ್ಮಾಯಿಯವರನ್ನು ಬೀಳಿಸಿ ನೋಡಲು ಹೊರಟಿದೆ ಹೈಕಮಾಂಡ್!. ಈ ಬದಲಾವಣೆ ಯತ್ನ ಸರ್ಕಾರದ ವೈಫಲ್ಯಕ್ಕೋ, 3 ಸಿಎಂ ಎಂಬ ನಿಮ್ಮ ಸಂಪ್ರದಾಯಕ್ಕೋ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
ಅಮಿತ್ ಶಾ ಬಂದು ಹೋದ ನಂತರ ಬಿಜೆಪಿಯಲ್ಲಿ ಮೋಡ ಕವಿದ ವಾತಾವರಣವಿದೆ! 40% ಸರ್ಕಾರದಲ್ಲಿ ‘3ನೇ ಸಿಎಂ’ ಸೀಟು ಹತ್ತುವ ಕಾಲ ಸನ್ನಿಹಿತವಾಗಿದೆ! #PuppetCM ಬೊಮ್ಮಾಯಿ ಅವರ ಗೊಂಬೆಯಾಟ ಮುಗಿಯುವ ಹಂತಕ್ಕೆ ಬಂದಿದೆ. ಅಮಿತ್ ಶಾ ಅವರ ಭೇಟಿಯ ಬಗ್ಗೆ ಸರ್ಕಾರದ ಯಾವೊಬ್ಬ ಸಚಿವರು ಮಾತಾಡದಿರುವುದು, ಸಂಭ್ರಮವಿಲ್ಲದಿರುವುದೇ ಇದಕ್ಕೆ ನಿದರ್ಶನ ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಕುಟುಕಿದೆ.
ಸಿಎಂ ಬೊಮ್ಮಾಯಿ ಅವರೇ, ಬಿಜೆಪಿಯ ನಕಲಿ ನೋಟ್ ದಂಧೆಕೋರರೊಂದಿಗೆ ನಿಮ್ಮದೇನು ಸಂಬಂಧ?
ಸಮಾಜಘಾತುಕರು, ಬಿಟ್ ಕಾಯಿನ್ ದಂಧೆಕೋರರು, 40% ಕಮಿಷನ್ ಗಿರಾಕಿಗಳು, ನೇಮಕಾತಿ ಅಕ್ರಮ ನಡೆಸುವವರು, ನಕಲಿ ನೋಟ್ ದಂಧೆಕೊರರು ಆಡಿಸಿದಂತೆ ಆಡುವ #PuppetCM ಮಾತ್ರವೇ? ಕುರ್ಚಿ ಉಳಿಸಿಕೊಳ್ಳಲು ಈ ಎಲ್ಲಾ ಬಗೆಯ ಭ್ರಷ್ಟರಿಗೆ ಬೆಂಬಲವಾಗಿ ನಿಂತಿದ್ದೀರಾ? ಎಂದು ಪ್ರಶ್ನಿಸಿದೆ.
ಬಿಜೆಪಿ ಸರ್ಕಾರದ್ದು 40% ಕಮಿಷನ್ ದಂಧೆಯಾದರೆ, ಬಿಜೆಪಿ ಕಾರ್ಯಕರ್ತರದ್ದು ಡ್ರಗ್ ಪೆಡ್ಲಿಂಗ್, ನಕಲಿ ನೋಟಿನ ದಂಧೆ! ಬಿಜೆಪಿ ಐಟಿ ಸೆಲ್ಲಿನ #2rupeesbakta ನ ನಕಲಿ ನೋಟ್ ಪ್ರಿಂಟ್ ದಂಧೆಯಲ್ಲಿ ಬಿಜೆಪಿಗೂ 40% ಪಾಲು ಇದೆಯೇ? ಇಂತಹ ‘ದೋ ನಂಬರ್ ದಂಧಾ’ದಿಂದಲೇ #BJPBrashtotsava ನಡೆಸಲು ಹಣ ಕ್ರೋಡೀಕರಣವೇ ಬಿಜೆಪಿ? ಎಂದು ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿದೆ.