ಬೆಂಗಳೂರು: ಗೋಸಂಕುಲವನ್ನು ಸಂರಕ್ಷಿಸಲು ಗೋಶಾಲೆಗಳಲ್ಲಿರುವ ಜಾನುವಾರುಗಳನ್ನು ಪೋಷಣೆ ಮತ್ತು ಪಾಲನೆಗಾಗಿ ಸಾರ್ವಜನಿಕರು ಮತ್ತು ಖಾಸಗಿ ಸಂಸ್ಥೆಗಳು ದತ್ತು ತೆಗೆದುಕೊಳ್ಳುವುದನ್ನು ಪ್ರೋತ್ಸಾಹಿಸಲು ನಮ್ಮ ಸರ್ಕಾರ ರಾಷ್ಟ್ರದಲ್ಲಿಯೇ ಮೊದಲ ಬಾರಿಗೆ “ಪುಣ್ಯಕೋಟಿ ದತ್ತು ಯೋಜನೆ” ಪ್ರಾರಂಭಿಸಿದ್ದು, ಜು.28ರಂದು ಲೋಕಾರ್ಪಣೆ ಮಾಡಲಾಗುವುದು ಎಂದು ಪಶು ಸಂಗೋಪನೆ ಸಚಿವ ಪ್ರಭು ಬಿ.ಚವ್ಹಾಣ್ ಹೇಳಿದ್ದಾರೆ.
ವಿಕಾಸಸೌಧದ ಕಚೇರಿಯಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಜು.28ರಂದು ಒಂದು ವರ್ಷ ಪೂರೈಸುತ್ತಿರುವ ಹಿನ್ನೆಯಲ್ಲಿ ಅದೇ ದಿನ ಲೋಕಾರ್ಪಣೆ ಮಾಡಲಾಗುವುದು ಎಂದು ಸ್ವಷ್ಟಪಡಿಸಿದರು.
ಜಾನುವಾರುಗಳ ಪೋಷಣೆ ಮತ್ತು ಇತರೆ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸುವ ಸಲುವಾಗಿ ಗೋಶಾಲೆಗಳಲ್ಲಿರುವ ಜಾನುವಾರುಗಳನ್ನು ಸಾರ್ವಜನಿಕರು ಮತ್ತು ಖಾಸಗಿ ಸಂಸ್ಥೆಗಳು ದತ್ತು ತೆಗೆದುಕೊಳ್ಳುವುದನ್ನು ಪ್ರೋತ್ಸಾಹಿಸಲು ನಮ್ಮ ಸರ್ಕಾರವು ರಾಷ್ಟ್ರದಲ್ಲಿಯೇ ಮೊದಲ ಬಾರಿಗೆ “ಪುಣ್ಯಕೋಟಿ ದತ್ತು ಯೋಜನೆ”ಯನ್ನು ಪ್ರಾರಂಭಿಸಿದೆ ಎಂದರು.
ರಾಜ್ಯದಲ್ಲಿ ಒಟ್ಟು 215 ಕ್ಕೂ ಹೆಚ್ಚಿನ ಖಾಸಗಿ ಗೋಶಾಲೆಗಳಲ್ಲಿ ಜಾನುವಾರುಗಳಿಗೆ ಆಶ್ರಯ ಕಲ್ಪಿಸಲಾಗಿದೆ. 100 ಸರ್ಕಾರಿ ಗೋಶಾಲೆಗಳನ್ನು ಹಂತಹಂತವಾಗಿ ಪ್ರಾರಂಭ ಮಾಡುತ್ತಿದ್ದು, ಈ ಎಲ್ಲಾ ಗೋಶಾಲೆಗಳಲ್ಲಿ ದೇಶಿತಳಿ, ಮಿಶ್ರತಳಿ ಜಾನುವಾರಗಳು, ನಿರ್ಗತಿಕ, ನಿಶ್ಯಕ್ತ, ವಯಸ್ಸಾದ, ರೋಗಗ್ರಸ್ಥ, ರೈತರು ಸಾಕಲಾಗದೆ ತಂದು ಬಿಡುವ ಜಾನುವಾರುಗಳು, ಗಂಡು ಕರುಗಳು ಮತ್ತು ನ್ಯಾಯಾಲಯ ಹಾಗೂ ಪೋಲಿಸ್ ಕಸ್ಟಡಿಯಿಂದ ವಶಪಡಿಸಿಕೊಂಡ ಜಾನುವಾರುಗಳಿಗೆ ಆಶ್ರಯ ನೀಡಿ ಪೋಷಣೆ ಮಾಡಲಾಗುತ್ತಿದೆ ಎಂದು ಪ್ರಭು ಚವ್ಹಾಣ್ ವಿವರಿಸಿದರು.
ಗೋಶಾಲೆಗಳಲ್ಲಿರುವ ಜಾನುವಾರುಗಳಿಗೆ ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಲು ಮತ್ತು ಗೋಶಾಲೆಯ ಗೋವುಗಳನ್ನು ಸಂರಕ್ಷಿಸಲು ಸಾರ್ವಜನಿಕರನ್ನು ಪ್ರೇರೇಪಿಸುವುದು, ಗೋಶಾಲೆಗಳನ್ನು ಆರ್ಥಿಕವಾಗಿ ಸದೃಡಗೊಳಿಸುವುದು ಮತ್ತು ಗೋಶಾಲೆಗಳನ್ನು ಸಾರ್ವಜನಿಕರ ಸಹಕಾರದಿಂದ ನಿರಂತರವಾಗಿ ಯಾವುದೇ ಅಡಚಣೆಯಿಲ್ಲದೆ ನಡೆಸುವುದು ಈ ಯೋಜನೆಯ ಉದ್ದೇಶ ಎಂದು ಅವರು ತಿಳಿಸಿದರು.
ಜಾನುವಾರುಗಳ ದತ್ತು (ADOPT) ಯೋಜನೆಯಡಿ ಪುಣ್ಯಕೋಟಿ ದತ್ತು ಪೋರ್ಟಲ್‌ನಲ್ಲಿರುವ ಯಾವುದೇ ಗೋಶಾಲೆಗಳ ಪ್ರತಿ ಜಾನುವಾರಿಗೆ ವಾರ್ಷಿಕ ರೂ.11,000/- (ರೂಪಾಯಿ ಹನ್ನೊಂದು ಸಾವಿರ ಮಾತ್ರ) ಗಳನ್ನು ಪಾವತಿಸಿ ಜಾನುವಾರುಗಳನ್ನು ದತ್ತು ಪಡೆಯಬಹುದು.
ಜಾನುವರುಗಳಿಗಾಗಿ ಆಹಾರ (FEED A COW) ಯೋಜನೆಯಡಿ ಸಾರ್ವಜನಿಕರು ತಮ್ಮ ಜೀವನದ ವಿಶೇಷ ಸಂದರ್ಭಗಳಲ್ಲಿ (ಹುಟ್ಟುಹಬ್ಬ, ಮದುವೆ ವಾರ್ಷಿಕೋತ್ವವ ಇತ್ಯಾದಿ) ಪುಣ್ಯಕೋಟಿ ದತ್ತು ಪೋರ್ಟಲ್ ನಲ್ಲಿರುವ ಯಾವುದೇ ಗೋಶಾಲೆಗಳಲ್ಲಿರುವ ರಾಸುಗಳಿಗೆ ಒಂದು ದಿನಕ್ಕೆ ರೂ.70/- ರಂತೆ ತಮಗೆ ಇಷ್ಟವಾದಷ್ಟು ರಾಸುಗಳಿಗೆ ಆಹಾರಕ್ಕಾಗಿ ವಂತಿಗೆ ನೀಡಬಹುದಾಗಿದೆ.
ಗೋಶಾಲೆಗಳಿಗೆ ದೇಣಿಗೆ (Donation) ಯೋಜನೆಯಡಿ ಸಾರ್ವಜನಿಕರು ಪುಣ್ಯಕೋಟಿ ದತ್ತು ಪೋರ್ಟಲ್ ನಲ್ಲಿರುವ ಯಾವುದೇ ಗೋಶಾಲೆಗಳಿಗೆ ಕನಿಷ್ಠ ರೂ.10/- ಯಿಂದ ತಮ್ಮ ಶಕ್ತಾನುಸಾರ ಎಷ್ಟು ಬೇಕಾದರೂ ಮೂಲಭೂತ ಸೌಕರ್ಯ ಹಾಗೂ ಇತರೆ ವೆಚ್ಚಗಳಿಗಾಗಿ ದೇಣಿಗೆ ನೀಡಬಹುದು ಎಂದು ಸಂಕ್ಷಿಪ್ತವಾಗಿ ವಿವರಿಸಿದರು.
ಸಾರ್ವಜನಿಕರು/ಸಂಘ ಸಂಸ್ಥೆಗಳು ತಾವಿದ್ದ ಸ್ಥಳದಿಂದಲೇ ರಾಜ್ಯದಲ್ಲಿರುವ ಸರ್ಕಾರಿ ಮತ್ತು ಖಾಸಗಿ ಗೋಶಾಲೆಯಲ್ಲಿರುವ ಜಾನುವಾರುಗಳನ್ನು ದತ್ತು ಪಡೆಯುವ ಮೂಲಕ ನಾವೆಲ್ಲರೂ ಒಗ್ಗೂಡಿ ಗೋಸಂಕುಲ ರಕ್ಷಿಸೋಣ ಎಂದು ಪ್ರಭು ಚವ್ಹಾಣ್ ಇದೇ ವೇಳೆ ಮನವಿ ಮಾಡಿದರು.