ಪಂಜಾಬ್: ಹೆಂಡತಿ ಮಕ್ಕಳ ಎದುರಲ್ಲೇ ಎನ್‌ಆರ್‌ಐಗೆ ಶೂಟೌಟ್

Prasthutha|

ಚಂಡೀಗಡ: ಅಮೆರಿಕಾದಿಂದ ಸ್ವದೇಶಕ್ಕೆ ಮರಳಿ ಬಂದಿದ್ದ ಎನ್‌ಆರ್‌ಐ ವ್ಯಕ್ತಿಯನ್ನು ಆತನ ಮನೆಯಲ್ಲಿ, ಹೆಂಡತಿ ಮಕ್ಕಳ ಎದುರಲ್ಲೇ ಗುಂಡಿಕ್ಕಿದ ಭೀಕರ ಘಟನೆ ಪಂಜಾಬ್‌ನ ಅಮೃತಸರದ ದಬುರ್ಜಿ ಪ್ರದೇಶದಲ್ಲಿ ನಡೆದಿದೆ.

- Advertisement -

ಸುಖಚೈನ್ ಸಿಂಗ್ ಗಂಭೀರವಾಗಿ ಗಾಯಗೊಂಡು ಐಸಿಯುನಲ್ಲಿ ಚಿಕಿತ್ಸೆಯಲ್ಲಿರುವ ವ್ಯಕ್ತಿ. ಭೀಕರ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್‌ ಆಗಿದ್ದು, ಎಲ್ಲೆಡೆ ಭಾರೀ ವೈರಲ್‌ ಆಗುತ್ತಿದೆ. ಸುಖಚೈನ್ ಸಿಂಗ್ ಅವರನ್ನು ಬಿಟ್ಟುಬಿಡುವಂತೆ ಅವರ ಪತ್ನಿ ಮತ್ತು ಮಗು ಎಷ್ಟೇ ಬೇಡಿಕೊಂಡರೂ ಕೇಳದೇ ಶೂಟ್‌ ಮಾಡುತ್ತಿರುವುದ್ನು ಈ ವಿಡಿಯೋದಲ್ಲಿ ಕಾಣಬಹುದಾಗಿದೆ. ಕೃತ್ಯದ ನಂತರ ದಾಳಿಕೋರರು ಸ್ಥಳದಿಂದ ಪರಾರಿಯಾಗುತ್ತಿರುವ ದೃಶ್ಯಾವಳಿಗಳು ತೋರಿಸಿವೆ.

ಬೈಕ್‌ನಲ್ಲಿ ಬಂದ ಇಬ್ಬರು ಶಸ್ತ್ರಸಜ್ಜಿತ ದುಷ್ಕರ್ಮಿಗಳು ಸುಖಚೈನ್ ಸಿಂಗ್ ಅವರ ನಿವಾಸಕ್ಕೆ ನುಗ್ಗಿ ಅವರ ಪತ್ನಿ ಮತ್ತು ಮಗುವಿನ ಎದುರೇ ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರವ ಸಿಂಗ್‌ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಶಸ್ತ್ರಸಜ್ಜಿತ ದಾಳಿಕೋರರು ಸಿಂಗ್ ಅವರ ಕಾರಿನ ನೋಂದಣಿ ಪ್ರಮಾಣಪತ್ರದ ಬಗ್ಗೆ ವಿಚಾರಿಸುವ ನೆಪದಲ್ಲಿ ಬಂದು ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ.

- Advertisement -

ದಾಳಿಯ ಹಿಂದೆ ಸಿಂಗ್ ಅವರ ಮೊದಲ ಪತ್ನಿಯ ಕುಟುಂಬದ ಕೈವಾಡವಿದೆ ಎಂದು ಅವರ ತಾಯಿ ಹೇಳಿದ್ದಾರೆ. ಈ ವಿಚಾರದಲ್ಲಿ ತಕ್ಷಣ ಕ್ರಮ ಕೈಗೊಳ್ಳುವಂತೆ ಅಮೃತಸರ ಪೊಲೀಸ್ ಆಯುಕ್ತರಿಗೆ ಸರ್ಕಾರ ಸೂಚಿಸಿದೆ. ಸುಖಚೈನ್ ಸಿಂಗ್ ಅವರ ಕುಟುಂಬವು ಅವರ ಮಾಜಿ ಪತ್ನಿಯ ಐದು ಕುಟುಂಬದ ಸದಸ್ಯರ ವಿರುದ್ಧ ಎಫ್‌ಐಆರ್ ದಾಖಲಿಸಿದೆ ಎಂದು ಎಎನ್‌ಐ ವರದಿ ಮಾಡಿದೆ.

ಪೊಲೀಸರು ನಿವಾಸದ ಎಲ್ಲಾ ಸಿಸಿಟಿವಿಗಳನ್ನು ವಶಪಡಿಸಿಕೊಂಡಿದ್ದಾರೆ ಮತ್ತು ಘಟನೆಯ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಇನ್ನು ರಾಜ್ಯದಲ್ಲಿ ಆಪ್‌ ಆಡಳಿತಾವಧಿಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಬಿಜೆಪಿ ಆರೋಪಿಸಿದೆ.



Join Whatsapp