ಲುಧಿಯಾನ : ಪ್ರಧಾನಿ ನರೇಂದ್ರ ಮೋದಿ ಸರಕಾರದ ನೂತನ ಕೃಷಿ ನೀತಿ ವಿರುದ್ಧದ ರೈತರ ಪ್ರತಿಭಟನೆಯ ಆಕ್ರೋಶ ಈಗ ರಿಲಯನ್ಸ್ ಗ್ರೂಪ್ ವಿರುದ್ಧ ತಿರುಗಿದೆ. ಈಗಾಗಲೇ ರಿಲಯನ್ಸ್ ಪೆಟ್ರೋಲ್ ಪಂಪ್ ಗಳು ಮತ್ತು ಔಟ್ ಲೆಟ್ ಗಳ ಹೊರಗೆ ಪ್ರತಿಭಟನೆ ನಡೆಸಿರುವ ರೈತರು ಇಂದು ಜಿಯೊ ಮೊಬೈಲ್ ಟವರ್ ಗೆ ಪವರ್ ಸಪ್ಲೈ (ವಿದ್ಯುತ್ ಪೂರೈಕೆ) ಕಡಿತ ಮಾಡಲಾರಂಭಿಸಿದ್ದಾರೆ.
ನೂತನ ಕೃಷಿ ಕಾಯ್ದೆಗಳಿಂದ ರಿಲಯನ್ಸ್ ನಂತಹ ಬಹುರಾಷ್ಟ್ರೀಯ ಕಂಪೆನಿಗಳಿಗೆ ಲಾಭ ತಂದುಕೊಡಲಿದೆ ಎಂಬ ಅಭಿಪ್ರಾಯ ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ರೈತರ ಆಕ್ರೋಶ ರಿಲಯನ್ಸ್ ವಿರುದ್ಧ ಭುಗಿಲೆದ್ದಿದೆ.
ನವಾನ್ ಶಹರ್, ಫಿರೋಝ್ ಪುರ, ಮನ್ಸ, ಬರ್ನಾಲ, ಫಝಿಲ್ಕಾ, ಪಟಿಯಾಲ ಮತ್ತು ಮೊಗಾ ಜಿಲ್ಲೆಯ ಹಲವು ಜಿಯೊ ಟವರ್ ಗಳ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ.
ಫಿರೋಝ್ ಪುರದ ಐದು ಜಿಯೊ ಮೊಬೈಲ್ ಟವರ್ ಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದೇವೆ. ನಾವು ನಮ್ಮ ಪ್ರತಿಭಟನೆ ದಾಖಲಿಸಲು ಇದನ್ನು ಮಾಡಿದ್ದೇವೆ. ನಮ್ಮ ಹೋರಾಟ ಕಾರ್ಪೊರೇಟ್ ಸಂಸ್ಥೆಗಳ ವಿರುದ್ಧವೂ ನಡೆಯಲಿದೆ ಎಂದು ಬಿಕೆಯು ಮುಖಂಡ ದರ್ಶನ್ ಸಿಂಗ್ ಕರ್ಹಮಾ ಹೇಳಿದ್ದಾರೆ. ಮನ್ಸ ಜಿಲ್ಲೆಯಲ್ಲಿ ನಾಲ್ಕು, ನವಾನ್ ಶಹರ್ ಜಿಲ್ಲೆಯಲ್ಲಿ 11 ಮೊಬೈಲ್ ಟವರ್ ಗಳ ವಿದ್ಯುತ್ ಪೂರೈಕೆ ಬಂದ್ ಮಾಡಲಾಗಿದೆ.
ಭಟಿಂಡಾ ಮತ್ತು ಬರ್ನಾಲದಲ್ಲಿನ ಬಹುತೇಕ ಟವರ್ ಗಳ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಿ ಗೇಟ್ ಗಳಿಗೆ ರೈತರು ಬೀಗ ಹಾಕಿದ್ದಾರೆ.