ಚಂಡೀಗಢ: ಪಂಜಾಬ್ ವಿಧಾನಸಭಾ ಚುನಾವಣೆಯನ್ನು ಮುಂದೂಡಬೇಕೆಂದು ಕೋರಿ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ, ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.
ಗುರು ರವಿದಾಸ್ ಜಯಂತಿ ಹಿನ್ನೆಲೆಯಲ್ಲಿ ವಿಧಾನಸಭಾ ಚುನಾವಣೆಯನ್ನು ಕನಿಷ್ಠ ಆರು ದಿನಗಳವರೆಗೆ ಮುಂದೂಡಬೇಕು ಎಂದು ಮುಖ್ಯಮಂತ್ರಿ ಚನ್ನಿ, ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಗುರು ರವಿದಾಸ್ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ಫೆ. 10ರಿಂದ 16ರವರೆಗಿನ ಅವಧಿಯಲ್ಲಿ ಸುಮಾರು 20 ಲಕ್ಷದಷ್ಟು ಜನರು ಉತ್ತರ ಪ್ರದೇಶದ ಬನಾರಸ್‌ಗೆ ತೆರಳುವುದರಿಂದ ದೊಡ್ಡ ಸಂಖ್ಯೆಯ ಮತದಾರರು ಮತದಾನದಿಂದ ವಂಚಿತರಾಗುತ್ತಾರೆ. ಹೀಗಾಗಿ ಅವರಿಗೂ ಮತದಾನದ ಅವಕಾಶ ಕಲ್ಪಿಸುವ ಸಲುವಾಗಿ ಚುನಾವಣೆಯನ್ನು ಮುಂದೂಡಬೇಕು ಎಂದು ಚನ್ನಿ ಕೇಳಿಕೊಂಡಿದ್ದಾರೆ.
ಈ ಮೊದಲು BSP ಪಂಜಾಬ್ ಮುಖ್ಯಸ್ಥ ಜಸ್ವೀರ್ ಸಿಂಗ್ ಗಾರ್ಹಿ, ಚುನಾವಣೆ ಮುಂದೂಡುವಂತೆ ಆಯೋಗಕ್ಕೆ ಮನವಿ ಮಾಡಿದ್ದರು.
ಪಂಜಾಬ್ ವಿಧಾನಸಭಾ ಚುನಾವಣೆ ಫೆಬ್ರುವರಿ 14ರಂದು ನಡೆಯಲಿದ್ದು, ಮಾರ್ಚ್ 10ರಂದು ಮತ ಎಣಿಕೆ ನಡೆಯಲಿದೆ.