ಪುನೀತ್ ರಾಜ್ ಕುಮಾರ್ ಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ

Prasthutha|

ಬೆಂಗಳೂರು: ನಟ, ದಿ.ಪುನೀತ್ ರಾಜ್ಕುಮಾರ್ ಅವರಿಗೆ ಕರ್ನಾಟಕ ಸರಕಾರ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಿದ್ದು, ಸಮಾರಂಭದಲ್ಲಿ ಸೂಪರ್ಸ್ಟಾರ್ ರಜನಿಕಾಂತ್, ಜೂನಿಯರ್ ಎನ್ಟಿಆರ್, ಸುಧಾ ಮೂರ್ತಿ ಹಾಜರಿದ್ದರು.
ವಿಧಾನಸೌಧದ ಮುಂದೆ ನಡೆದ ಕಾರ್ಯಕ್ರಮದಲ್ಲಿ ಪುನೀತ್ ಅವರ ಪರವಾಗಿ ಪುನೀತ್ ಪತ್ನಿ ಅಶ್ವಿನಿಯವರಿಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಪ್ರಶಸ್ತಿ ಪ್ರದಾನ ಮಾಡಿದರು.

- Advertisement -

ಅತ್ಯುನ್ನತ ನಾಗರಿಕ ಪ್ರಶಸ್ತಿ ಇದಾಗಿದ್ದು, ಈ ಗೌರವಕ್ಕೆ ಪಾತ್ರರಾಗುತ್ತಿರುವ 9ನೇ ರತ್ನ ಪುನೀತ್ ರಾಜ್ ಕುಮಾರ್ ಆಗಿದ್ದಾರೆ. ಆದರೆ ಮರಣೋತ್ತರವಾಗಿ ಈ ಪ್ರಶಸ್ತಿ ಪಡೆಯುತ್ತಿರುವ ಮೊದಲ ರತ್ನ ಇವರಾಗಿದ್ದಾರೆ. ಪುನೀತ್ ಅವರ ಸಿನಿಮಾ ಮತ್ತು ಸಮಾಜ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ. ಸಿನಿಮಾ ರಂಗಕ್ಕೆ ಇದರೊಂದಿಗೆ ಎರಡು ಕರ್ನಾಟಕ ರತ್ನ ಪ್ರಶಸ್ತಿಗಳು ಬಂದಿದ್ದು, 1992ರಲ್ಲಿ ಮೊದಲ ಬಾರಿಗೆ ಇದೇ ಪುನೀತ್ ತಂದೆ ಡಾ.ರಾಜ್ ಕುಮಾರ್ ಕರ್ನಾಟಕ ರತ್ನ ಪಡೆದಿದ್ದರು.

ಇವರಲ್ಲದೆ, ಈವರೆಗೂ ಸಾಹಿತ್ಯ ಸೇವೆಗಾಗಿ ಕುವೆಂಪು, ರಾಜಕೀಯ ಕ್ಷೇತ್ರದಲ್ಲಿಯ ಸಾಧನೆಗಾಗಿ ಎಸ್.ನಿಜಲಿಂಗಪ್ಪ, ವಿಜ್ಞಾನ ಕ್ಷೇತ್ರದ ಸಾಧನೆಗಾಗಿ ಸಿ.ಎನ್.ಆರ್.ರಾವ್, ಸಂಗೀತ ಸಾಧನೆಗಾಗಿ ಭೀಮಸೇನ್ ಜೋಷಿ, ಸಮಾಜಸೇವೆಗಾಗಿ ಸಿದ್ಧಗಂಗಾ ಮಠದ ಶಿವಕುಮಾರ ಮಹಾಸ್ವಾಮಿಗಳು ಹಾಗೂ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಈ ಗೌರವವನ್ನು ಪಡೆದುಕೊಂಡಿದ್ದಾರೆ.



Join Whatsapp