ಪುಲಿಟ್ಜರ್ ವಿಜೇತೆ, ಕಾಶ್ಮೀರಿ ಪತ್ರಕರ್ತೆ ಸನ್ನಾ ಇರ್ಷಾದ್ ವಿದೇಶ ಪ್ರಯಾಣಕ್ಕೆ ತಡೆ

Prasthutha|

ನವದೆಹಲಿ: ಪುಲಿಟ್ಜರ್ ವಿಜೇತೆ ಕಾಶ್ಮೀರಿ ಫೋಟೋ ಜರ್ನಲಿಸ್ಟ್ ಸನ್ನಾ ಇರ್ಷಾದ್ ಮಟ್ಟೂ ಅವರನ್ನು ವಲಸೆ ಅಧಿಕಾರಿಗಳು ದೆಹಲಿ ವಿಮಾನ ನಿಲ್ದಾಣದಲ್ಲಿ ತಡೆದಿದ್ದಾರೆ.

- Advertisement -

ಈ ಬಗ್ಗೆ ಟ್ವೀಟ್ ಮಾಡಿರುವ ಸನ್ನಾ ಇರ್ಷಾದ್, ನ್ಯೂಯಾರ್ಕ್ ನಲ್ಲಿ ಪುಲಿಟ್ಜರ್ ಪ್ರಶಸ್ತಿಯನ್ನು ಸ್ವೀಕರಿಸಲು ಹೊರಟಿದ್ದೆ. ಮಾನ್ಯತೆಗೊಂಡ ವೀಸಾ ಮತ್ತು ಟಿಕೆಟ್ ಹೊಂದಿದ್ದರೂ ಅಮೆರಿಕಕ್ಕೆ ತೆರಳದಂತೆ ಅಧಿಕಾರಿಗಳು ತಡೆದಿದ್ದಾರೆ. ಕಳೆದ ನಾಲ್ಕು ತಿಂಗಳಲ್ಲಿ ಎರಡನೇ ಬಾರಿಗೆ ವಿದೇಶ ಪ್ರವಾಸವನ್ನು ನಿರ್ಬಂಧಿಸಲಾಗಿದೆ. ಕಾರಣವಿಲ್ಲದೆ ನನ್ನನ್ನು ವಿದೇಶಕ್ಕೆ ತೆರಳದಂತೆ ತಡೆಯಲಾಗಿದೆ.ಇದರಿಂದಾಗಿ ಜೀವನದಲ್ಲಿ ನನಗೆ ಒಮ್ಮೆ ಸಿಕ್ಕಿದ ಪ್ರಶಸ್ತಿ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸದಂತಾಗಿದೆ ಎಂದು ತಿಳಿಸಿದರು.

ರಾಯಿಟರ್ಸ್ ನಲ್ಲಿನ ಕೋವಿಡ್ ಸಾಂಕ್ರಾಮಿಕ ರೋಗದ ಕವರೇಜ್ ಗಾಗಿ ಪುಲಿಟ್ಜರ್ ಪ್ರಶಸ್ತಿ ಪಡೆಯಲು 28 ವರ್ಷದ ಮಟ್ಟೂ ಸೋಮವಾರ ನ್ಯೂಯಾರ್ಕ್ ಗೆ ಹಾರಬೇಕಿತ್ತು.

- Advertisement -

ಪತ್ರಕರ್ತೆಯ ವಿದೇಶಿ ಪ್ರಯಾಣಕ್ಕೆ ಅನುಮತಿ‌ ನಿರಾಕರಿಸಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣದಲ್ಲಿ, ಸನ್ನಾ ಪ್ರಯಾಣಕ್ಕೆ ಅನುಮತಿ ನೀಡುವಂತೆ ಪೋಸ್ಟ್ ಗಳನ್ನು ಮಾಡಲಾಗುತ್ತಿದೆ.

“ಯಾವುದೇ ಸಕಾರಣವಿಲ್ಲದೆ ನನ್ನ ವಿದೇಶ ಪ್ರಯಾಣ ತಡೆದಿರುವುದು ಇದು ಎರಡನೆಯ ಬಾರಿ. ಕೆಲವು ವಾರಗಳ ಮೊದಲೂ ಹೀಗಾಯಿತು. ಇಂದಿಗೂ ಅದಕ್ಕೆ ಕಾರಣವೇನೆಂದು ನನಗೆ ತಿಳಿಸಿಲ್ಲ. ಇಂತಹ ಪ್ರಶಸ್ತಿ ಸ್ವೀಕಾರ ಸಮಾರಂಭದಲ್ಲಿ ಹಾಜರಿರುವುದು ಜೀವನದಲ್ಲಿ ಒಮ್ಮೆ ಮಾತ್ರ ಸಿಗುವ ಅಪೂರ್ವ ಅವಕಾಶ.” ಎಂದು ಸನ್ನಾ ವಿಷಾದಿಸಿದರು.

ವಿಮಾನ ಪ್ರಾಧಿಕಾರದವರಾಗಲಿ, ಸರಕಾರದ ವಲಸೆ ಅಧಿಕಾರಿಗಳಾಗಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಲು ಸಿಕ್ಕಿಲ್ಲ.

ಸನ್ನಾ ಅವರು ಕೋವಿಡ್ ಸಂಬಂಧಿ ಫೋಟೋ ಲೇಖನಕ್ಕೆ 2022ರ ಪುಲಿಟ್ಶರ್ ಪ್ರಶಸ್ತಿಗೆ ಭಾಜನರಾಗಿದ್ದರು. ಕಾಶ್ಮೀರದ ಸನ್ನಾ ಅವರು 2018ರಿಂದ ಫ್ರೀಲ್ಯಾನ್ಸ್ ಫೋಟೋ ಪತ್ರಕರ್ತೆಯಾಗಿ ಕೆಲಸ ಮಾಡುತ್ತಿದ್ದಾರೆ. 



Join Whatsapp