ಅಪಾಯಕ್ಕೆ ಕಾದಿರುವ ವಿದ್ಯುತ್ ಕಂಬ: ಮೆಸ್ಕಾಂಗೆ ಪುದು ಗ್ರಾ.ಪಂ ಮನವಿ

Prasthutha|

►ವಾಹನ ವ್ಯವಸ್ಥೆ, ಸಿಬ್ಬಂದಿ ಭರ್ತಿ ಮಾಡಲು ಮನವಿ

- Advertisement -


ಬಂಟ್ವಾಳ: ತಾಲ್ಲೂಕಿನ ಪುದು ಗ್ರಾಮದಲ್ಲಿ ವಿದ್ಯುತ್ ಕಂಬ ಶಿಥಿಲಗೊಂಡಿದ್ದು, ಯಾವುದೇ ಕ್ಷಣ ನೆಲಕ್ಕುರುಳುವ ಸ್ಥಿತಿಯಲ್ಲಿದೆ. ಇದರಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಶಿಥಿಲ ಕಂಬವನ್ನು ತೆರವುಗೊಳಿಸಿ, ಹೊಸ ಕಂಬ ಅಳವಡಿಸುವಂತೆ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಪುದು ಗ್ರಾಮ ಪಂಚಾಯತ್ ಮನವಿ ಮಾಡಿದೆ.


ಪುದು ಗ್ರಾಮದಲ್ಲಿ ಹಲವಾರು ವಿದ್ಯುತ್ ಕಂಬಗಳು ಹಾಗೂ ತಂತಿಗಳು ನೆಲಕ್ಕುರುಳುವ ಪರಿಸ್ಥಿತಿಯಲ್ಲಿದ್ದು, ಸುತ್ತ ಅನೇಕ ಮನೆಗಳಿವೆ. ಶಾಲೆಗೆ ಹೋಗುವ ಮಕ್ಕಳು ಅಲ್ಲೇ ಓಡಾಡಬೇಕು. ದಾರಿಯಲ್ಲಿ ಜನರು ಓಡಾಡುತ್ತಿರುತ್ತಾರೆ. ಕಂಬ ಉರುಳಿದರೆ ಅಪಾಯ ತಪ್ಪಿದ್ದಲ್ಲ ಹೀಗಾಗಿ ತುರ್ತು ಸ್ಪಂದಿಸಬೇಕೆಂದು ಮನವಿ ನೀಡಲಾಯಿತು.

- Advertisement -


ಅಮ್ಮೆಮಾರ್- ಕುಂಜತ್ಕಳ ರಸ್ತೆಯಲ್ಲಿ ಅಪಾಯ ಮಟ್ಟದಲ್ಲಿ ವಿದ್ಯುತ್ ಕಂಬವಿದ್ದು, ತುರ್ತಾಗಿ ಸ್ಥಳಾಂತರಿಸುವಂತೆ ಮನವಿ ಮಾಡಲಾಯಿತು. ಅಲ್ಲದೆ ಶಾಸಕ, ಸ್ಪೀಕರ್ ಖಾದರ್ ಅವರು ಅಧಿಕಾರಿಗಳ ಜೊತೆ ದೂರವಾಣಿಯ ಮೂಲಕ ಮಾತನಾಡಿ ಸ್ಪಂದಿಸುವಂತೆ ಆದೇಶ ನೀಡಿದ್ದಾರೆ. ಮೆಸ್ಕಾಂ ಅಧಿಕಾರಿಗಳು ಸಮಸ್ಯೆಯನ್ನು ಬಗೆಹರಿಸುವ ಭರವಸೆ ನೀಡಿದ್ದಾರೆ.


ಬಂಟ್ವಾಳ ತಾಲೂಕಿನ ಪುದು ಗ್ರಾಮ ಪಂಚಾಯತ್ ವ್ಯಾಪ್ತಿಯ ಫರಂಗಿಪೇಟೆ ಎಂಬಲ್ಲಿರುವ ಮೆಸ್ಕಾಂ ಶಾಖಾ ಕಚೇರಿಗೆ ರಾತ್ರಿ ವೇಳೆಯಲ್ಲಿ ಕೆಲಸ ಮಾಡಲು ಜೀಪ್ (ವಾಹನ) ವ್ಯವಸ್ಥೆ ಇಲ್ಲ. ಅಲ್ಲದೇ ಮೆಸ್ಕಾಂ ಶಾಖಾ ಕಚೇರಿಗೆ ಒಳಪಟ್ಟ ಸಿಬ್ಬಂದಿ ವರ್ಗಾವಣೆಯಾಗಿರುವುದರಿಂದ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.


ಈ ವೇಳೆ ದ.ಕ ಜಿಲ್ಲಾ ಪಂಚಾಯತ್ ಸದಸ್ಯ ಉಮರ್ ಫಾರೂಕ್, ಪುದು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಇಕ್ಬಾಲ್ ಸುಜೀರ್, ಪುದು ಗ್ರಾ.ಪಂ. ಮಾಜಿ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಬದ್ರುದ್ದೀನ್ ಕರ್ಮಾರ್ ಉಪಸ್ಥಿತರಿದ್ದರು.





Join Whatsapp