ಬಂಟ್ವಾಳ: ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರುವ ಎಲ್ಲಾ ಅವಕಾಶಗಳು ಇದ್ದರೂ ಕೂಡ ಬಂಟ್ವಾಳ ತಾಲೂಕಿನ, ಮಂಗಳೂರು ವಿಧಾನಸಭಾ ಕ್ಷೇತ್ರಕ್ಕೊಳಪಟ್ಟ ಪುದು ಗ್ರಾಮ ಪಂಚಾಯತಿಗೆ ಇನ್ನೂ ಆ ಭಾಗ್ಯ ಒದಗಿ ಬಂದಿಲ್ಲ. ರಾಷ್ಟ್ರೀಯ ಹೆದ್ದಾರಿ 75ರ ಮಂಗಳೂರು- ಬಿ.ಸಿ.ರೋಡು ಮಧ್ಯೆ ಅತ್ಯಂತ ತ್ವರಿಗತಿಯಾಗಿ ಬೆಳವಣಿಯಾಗುತ್ತಿರುವ ಫರಂಗಿಪೇಟೆಯಂತಹ ಪ್ರದೇಶಗಳನ್ನು ಒಳಗೊಂಡಿರುವ ಪುದು ಪಂಚಾಯತ್ ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಬೇಕೆನ್ನುವ ಜನರ ಬಹುವರ್ಷಗಳ ಬೇಡಿಕೆ ಸರ್ಕಾರದ ಇಚ್ಛಾಶಕ್ತಿಯ ಕೊರತೆಯಿಂದಾಗಿ ಈಡೇರುತ್ತಿಲ್ಲ.
ಬಂಟ್ವಾಳ ತಾಲೂಕಿನ ಪೈಕಿ ಪುದು ಗ್ರಾಮ ಅತ್ಯಧಿಕ ಜನ ಸಂಖ್ಯೆಯನ್ನು ಹೊಂದಿರುವ ಗ್ರಾಮ. ಪ್ರಸ್ತುತ ಹದಿನೇಳು ಸಾವಿರಕ್ಕಿಂತಲೂ ಅಧಿಕ ಜನಸಂಖ್ಯೆ ಇದೆ. ಪಂಚಾಯತಿನಲ್ಲಿ ೩೪ ಸದಸ್ಯ ಬಲವನ್ನು ಹೊಂದಿದ್ದು ಜಿಲ್ಲೆಯಲ್ಲಿ ಅತ್ಯಧಿಕ ಹೆಚ್ಚು ಸದಸ್ಯರನ್ನು ಹೊಂದಿರುವ ಪಂಚಾಯತಿ ಎನ್ನುವ ಹೆಗ್ಗಳಿಕೆಯೂ ಇದೆ.
ಅಧಿಸೂಚಿತ ಪ್ರದೇಶ:
೧೯೯೩-೯೪ರ ಸಾಲಿನಲ್ಲಿ ಪುದು ಪಂಚಾಯತನ್ನು ಪಟ್ಟಣ ಪಂಚಾಯತಾಗಿ ಮೇಲ್ದರ್ಜೆಗೇರಿಸುವ ಸಲುವಾಗಿ ಅಂದಿನ ಚುನಾವಣೆಯನ್ನು ತಡೆಹಿಡಿದ ಸರಕಾರ ಗ್ರಾಮ ಪಂಚಾಯತಿಯನ್ನು ಅಧಿಸೂಚಿತ ಪ್ರದೇಶವನ್ನಾಗಿ ಘೋಷಣೆ ಮಾಡಿತು. ಸುಮಾರು ೪ ವರ್ಷಗಳ ಕಾಲ ಅಧಿಸೂಚಿತ ಪ್ರದೇಶವೆಂದು ಮುಂದುವರಿದ ಪುದು ಪಂಚಾಯತಿಯನ್ನು ೧೯೯೭-೯೮ರಲ್ಲಿ ಗ್ರಾಮ ಪಂಚಾಯತಿಯಾಗಿಯೇ ಮುಂದವರಿಯುವಂತೆ ಸರಕಾರ ಮರು ಆದೇಶ ನೀಡಿತ್ತು. ಈ ಕಾರಣಗಳಿಂದ ಬಂಟ್ವಾಳ ತಾಲೂಕಿನ ಎಲ್ಲಾ ಗ್ರಾಮಪಂಚಾಯತಿಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆದರೆ ಪುದು ಪಂಚಾಯತಿಗೆ ಪ್ರತ್ಯೇಕವಾಗಿ ಚುನಾವಣೆ ನಡೆಯುತ್ತಿದೆ. ಆ ಬಳಿಕವೂ ಸುಮಾರು ೨೫ ವರ್ಷಗಳ ಕಾಲ ಗ್ರಾಮ ಪಂಚಾಯತಿಯಾಗಿಯೇ ಮುಂದುವರಿದುಕೊಂಡು ಬರುತ್ತಿದ್ದು ಪಟ್ಟಣ ಪಂಚಾಯತಿ ಆಗಿ ಮೇಲ್ದರ್ಜೆಗೇರಿಸಬೇಕು ಎನ್ನುವ ಪ್ರಸ್ತಾಪವನ್ನು ಹಲವು ಭಾರಿ ಸಲ್ಲಿಸಿದರೂ ಕೂಡ ಪೂರಕ ಸ್ಪಂದನೆ ಸಿಕ್ಕಿಲ್ಲ.
೨೦೧೦-೧೧ನೇ ಸಾಲಿನ ಜನಗಣತಿಯ ಆಧಾರದಲ್ಲಿ ೧೩ ಸಾವಿರ ಜನ ಸಂಖ್ಯೆಯನ್ನು ಹೊಂದಿದ್ದ ಪುದು ಗ್ರಾಮವು ಪ್ರಸ್ತುತ ಸಾಲಿನಲ್ಲಿ ೧೭೫೦೦ ರಷ್ಟು ಜನಸಂಖ್ಯೆಯನ್ನು ಹೊಂದಿದ್ದರೂ ಸರಕಾರದ ಜನಗಣತಿಯಲ್ಲಿ ನೋಂದಾವಣೆಯಾಗದಿರುವುದು ಈ ಹಿನ್ನಡೆಗೆ ಕಾರಣ ಎನ್ನುವ ಆರೋಪವೂ ಇದೆ. ಈಗಾಗಲೇ ನೋಂದಾವಣೆಯಾಗಿರುವ ಆಯುಷ್ಮಾನ್ ಭಾರತ್ ಯೋಜನೆಯಡಿಯಲ್ಲಿ ೧೫ ಸಾವಿರಕ್ಕಿಂತಲೂ ಹೆಚ್ಚು ಜನಸಂಖ್ಯೆ ದಾಖಲಾಗಿದ್ದರೂ ಪಂಚಾಯತನ್ನು ಪಟ್ಟಣಪಂಚಾಯತಾಗಿ ಮೇಲ್ದರ್ಜೆಗೇರಿಸಲು ಸರಕಾರ ಉತ್ಸಾಹ ತೋರದಿರುವುದು ಖೇದಕರ ಎನ್ನುವುದು ಗ್ರಾಮಸ್ಥರ ಅಭಿಪ್ರಾಯ.
ಅಧಿವೇಶನದಲ್ಲಿ ಪ್ರಸ್ತಾಪ:
ಕಳೆದ ವಿಧಾನಮಂಡಲ ಅಧಿವೇಶನದಲ್ಲಿ ವಿಧಾನಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್ ಅವರು ಪುದು ಗ್ರಾಮ ಪಂಚಾಯತಿಯನ್ನು ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೇರಿಸುವಂತೆ ಸರಕಾರವನ್ನು ಆಗ್ರಹಿಸಿದ್ದರು. ಕಳೆದ ಹಲವು ವರ್ಷಗಳಿಂದ ಮೇಲ್ದರ್ಜೆಯ ಪ್ರಸ್ತಾವನೆ ಇದ್ದು ಸರಕಾರ ಕ್ರಮ ಕೈಗೊಳ್ಳದಿರುವ ಬಗ್ಗೆ ಗಮನ ಸೆಳೆದಿದ್ದರು. ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಇದಕ್ಕೆ ಪೂರಕವಾಗಿ ಸಹಮತ ವ್ಯಕ್ತಪಡಿಸಿದ್ದರು. ಹೀಗಾಗಿ ಆಡಳಿತ ಮತ್ತು ವಿರೋಧ ಪಕ್ಷಗಳು ಎರಡೂ ಒಲವು ಹೊಂದಿರುವುದು ಸ್ಪಷ್ಟಗೊಂಡಿದೆ. ಪುದು ಪಟ್ಟಣ ಪಂಚಾಯತಿ ಆಗಿ ಮೇಲ್ದರ್ಜೆಗೇರಿದರೆ ಬಂಟ್ವಾಳ ತಾಲೂಕಿನ ಮೂರನೇ ನಗರ ಸ್ಥಳೀಯಾಡಳಿತ ಸಂಸ್ಥೆಯಾಗಲಿದೆ.