ಮಂಗಳೂರು| ಪಿಯು ಪರೀಕ್ಷೆ ಹಿನ್ನೆಲೆ; ಶುಕ್ರವಾರದ ಸಾಮೂಹಿಕ ನಮಾಝ್ ಸಮಯ ಬದಲಾವಣೆ

Prasthutha|

ಮಂಗಳೂರು: ರಾಜ್ಯಾದ್ಯಂತ ಎಪ್ರಿಲ್ 22 ರಿಂದ ಮೇ 18 ರ ವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಮುಸ್ಲಿಮ್ ವಿದ್ಯಾರ್ಥಿಗಳಿಗೆ  ಶುಕ್ರವಾರದ ಜುಮಾ ನಮಾಝ್ ನಷ್ಟ ಹೊಂದಬಾರದೆಂಬ ನಿಟ್ಟಿನಲ್ಲಿ ಮಂಗಳೂರು ಆಸುಪಾಸಿನ ಕೆಲವು ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನಾ ಸಮಯವನ್ನು ಬದಲಾಯಿಸಲಾಗಿದೆ.

- Advertisement -

ಮಧ್ಯಾಹ್ನ 1.30 ರ ವರೆಗೆ ಪರೀಕ್ಷಾ ಅವಧಿಯಾಗಿದ್ದು, ಶುಕ್ರವಾರದ ಸಾಮೂಹಿಕ ನಮಾಝ್ ತಪ್ಪುತ್ತದೆ ಎಂದು ಕೆಲವು ವಿದ್ಯಾರ್ಥಿಗಳ ಪೋಷಕರು ಹೇಳಿದ್ದರು. ಮಸೀದಿಗಳ ಆಡಳಿತ ಮಂಡಳಿಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಎರಡು ಶುಕ್ರವಾರಗಳ ಮಟ್ಟಿಗೆ ಕೆಲವೆಡೆ ಸಮಯ ಬದಲಾವಣೆ ಮಾಡಲಾಗಿದೆ ಎಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಮೂಸಬ್ಬ ಬ್ಯಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಸಾಮಾನ್ಯವಾಗಿ ಶುಕ್ರವಾರ  1.15 -1.30 ರ ವೇಳೆಗೆ  ನಮಾಝ್ ನಡೆಯುತ್ತಿದ್ದು, ಮಂಗಳೂರು ಬಂದರ್ ನ ಕಚ್ ಮೇಮನ್ ಮಸೀದಿ, ಕಾರ್ ಸ್ಟ್ರೀಟ್  ಸಮೀಪದ ಶಾಹ್ ಅಮೀರ್ ಮಸೀದಿಯಲ್ಲಿ ಮಧ್ಯಾಹ್ನ 1.40 ಕ್ಕೆ ಸಮಯ ಬದಲಾವಣೆ ಮಾಡಲಾಗಿದೆ. ಕುದ್ರೋಳಿಯ ಜಾಮಿಯಾ ಮಸೀದಿಯಲ್ಲಿ 1.50 ಕ್ಕೆ ಮುಂದೂಡಲಾಗಿದೆ. ಸುರತ್ಕಲ್ ಭಾಗದಲ್ಲೂ ಕೆಲವು ಮಸೀದಿಗಳು ಸಮಯ ಬದಲಾವಣೆ ಮಾಡಲಿವೆ ಎಂದು ಅಧ್ಯಕ್ಷ ಮೂಸಬ್ಬ ಬ್ಯಾರಿ ತಿಳಿಸಿದ್ದಾರೆ.

- Advertisement -

ಸಾಮಾನ್ಯವಾಗಿ ಸಾಮೂಹಿಕ ನಮಾಝ್ ಸಮಯ ಬದಲಾವಣೆ ಎಂಬುವುದು ಇರುವುದಿಲ್ಲ. ಹಾಗೆ ಸಮಯ ಬದಲಾವಣೆ ಮಾಡಬೇಕಾದರೆ ಕೆಲವೊಂದು ನಿರ್ದಿಷ್ಟ ಕಾರಣಗಳು ಬೇಕಾಗುತ್ತವೆ. ಖಾಝಿಗಳು ಮತ್ತು ಮಸೀದಿಯ ಆಡಳಿತ ಮಂಡಳಿಗಳ ಜೊತೆ ಸಮಾಲೋಚನೆ ನಡೆಸಿದ ಬಳಿಕ ಈ ನಿರ್ಧಾರಕ್ಕೆ ಬರಲಾಗಿದೆ. ಕೋವಿಡ್ ಲಾಕ್ ಡೌನ್ ಬಳಿಕ ಹಲವು ಶರತ್ತುಗಳೊಂದಿಗೆ ಮಸೀದಿಗಳು ತೆರದಾಗ ಮಾತ್ರ ಕೆಲವೆಡೆ ಸಮಯ ಬದಲಾವಣೆ ಮಾಡಲಾಗಿತ್ತು. ಆ ಬಳಿಕ ಇದೇ ಮೊದಲ ಬಾರಿಗೆ ಇಂತಹ ಬದಲಾವಣೆ ಮಾಡಲಾಗಿದೆ.



Join Whatsapp