ಬೆಂಗಳೂರು: ಪಿಎಸ್ ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿ 50 ಅಭ್ಯರ್ಥಿಗಳನ್ನು ವಿಚಾರಣೆಗೆ ಹಾಜರಾಗುವಂತೆ ಸಿಐಡಿ ನೋಟಿಸ್ ನೀಡಿದೆ. ಬುಧವಾರ ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ಸಿಐಡಿ ಕಚೇರಿ ಮುಂಭಾಗ ವಿಚಾರಣೆಗೆ ಹಾಜರಾಗಬೇಕು ಎಂದು ಸಿಐಡಿ ಡಿವೈಎಸ್ಪಿ ಪಿ.ನರಸಿಂಹಮೂರ್ತಿ ನೋಟಿಸ್ ನಲ್ಲಿ ಸೂಚಿಸಿದ್ದಾರೆ.
ರಾಜ್ಯದಲ್ಲಿ 545 PSI ಹುದ್ದೆ ನೇಮಕಾತಿಗೆ ನಡೆದ ಪರೀಕ್ಷೆಯಲ್ಲಿ ಭಾರೀ ಅಕ್ರಮ ನಡೆದಿರುವ ಪ್ರಕರಣ ಸಂಬಂಧ ಸಿಐಡಿ ತನಿಖೆ ನಡೆಸುತ್ತಿದ್ದು, 50 ಅಭ್ಯರ್ಥಿಗಳನ್ನು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ನೋಟಿಸ್ ಜಾರಿಗೊಳಿಸಿದೆ. ವಿಚಾರಣೆಗೆ ಹಾಜರಾಗುವ ಸಂದರ್ಭದಲ್ಲಿ ನೇಮಕಾತಿ ಪರೀಕ್ಷೆಯ ಪತ್ರ ಹಾಗೂ ಓಎಂಆರ್ ಶೀಟ್ ಪ್ರತಿಯನ್ನು ಕಡ್ಡಾಯವಾಗಿ ತರುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
ಈ ಪರೀಕ್ಷೆಗೆ 54,104 ಅಭ್ಯರ್ಥಿಗಳು ಹಾಜರಾಗಿದ್ದರು. ಫಲಿತಾಂಶ ಪ್ರಕಟಣೆಯ ನಂತರ ಕೆಲವು ವ್ಯತ್ಯಾಸಗಳು ವರದಿಯಾದ ಮೇರೆಗೆ ಆಂತರಿಕ ವಿಚಾರಣೆ ನಡೆಸಲಾಯಿತು. ಏ.7ರಂದು ಕೆಲವು ದುಷ್ಕೃತ್ಯಗಳ ಬಗ್ಗೆ ಪುರಾವೆಗಳು ಕಂಡು ಬಂದಿದ್ದರಿಂದ, ಗೃಹ ಸಚಿವರು ಸ್ವತಹ ಸಂಪೂರ್ಣ ನೇಮಕಾತಿ ಪ್ರಕ್ರಿಯೆ ಮತ್ತು ಅಪಾದಿತ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸಲು ಸಿಐಡಿಗೆ ಅದೇಶಿಸಿದರು.