ಪಿಎಸ್ ಐ ನೇಮಕಾತಿ ಅಕ್ರಮ: ಮುಂದುವರೆದ ಅಭ್ಯರ್ಥಿಗಳ ವಿಚಾರಣೆ

Prasthutha|

ಬೆಂಗಳೂರು: ಪೊಲೀಸ್ ಸಬ್ ಇನ್ಸ್ ಪೆಕ್ಟರ್ (ಪಿಎಸ್ ಐ) ನೇಮಕಾತಿ ಅಕ್ರಮ ಪ್ರಕರಣದಲ್ಲಿ ತಾತ್ಕಾಲಿಕ ಆಯ್ಕೆ ಅಭ್ಯರ್ಥಿಗಳ ವಿಚಾರಣೆ ಮುಂದುವರೆದಿದೆ. ಪ್ರಕರಣದಲ್ಲಿ 50 ಜನ ಅಭ್ಯರ್ಥಿಗಳಿಗೆ  ವಿಚಾರಣೆಗೆ ಹಾಜರಾಗುವಂತೆ ಸಿಐಡಿಯ ತನಿಖಾಧಿಕಾರಿಗಳು ಸೂಚಿಸಿದ್ದು ನಿನ್ನೆ ಆ ಪೈಕಿ ಐವರು ಅಭ್ಯರ್ಥಿಗಳು ಗೈರಾಗಿದ್ದು ಉಳಿದ ಅಭ್ಯರ್ಥಿಗಳ ವಿಚಾರಣೆ ನಡೆಸಲಾಗಿದೆ.

- Advertisement -

ಇಂದೂ ಕೂಡ 50 ಅಭ್ಯರ್ಥಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ಸಿಆರ್ಪಿಸಿ ಕಲಂ 91ರ ಅಡಿ ನೊಟೀಸ್ ನೀಡಲಾಗಿದ್ದು, ಪ್ರತಿ ಅಭ್ಯರ್ಥಿಯ ಪ್ರವೇಶ ಪತ್ರ ಪರಿಶೀಲಿಸಿ ವಿಡಿಯೋ ಚಿತ್ರೀಕರಣದೊಂದಿಗೆ ವಿಚಾರಣೆ ನಡೆಯಲಿದೆ.

ಕಳೆದ 2020-21ನೇ ಸಾಲಿನಲ್ಲಿ ಉತ್ತೀರ್ಣರಾದ 545 ಅಭ್ಯರ್ಥಿಗಳನ್ನ ಹಂತ ಹಂತವಾಗಿ ಸಿಐಡಿ ವಿಚಾರಣೆ ನಡೆಸಲಿದ್ದು, ತನಿಖಾಧಿಕಾರಿ ನರಸಿಂಹ ಮೂರ್ತಿ ನೇತೃತ್ವದಲ್ಲಿ ವಿಚಾರಣೆ ಪ್ರಕ್ರಿಯೆ ನಡೆಸಲಾಗುತ್ತಿದೆ.

- Advertisement -

ಪಿಎಸ್ ಐ ನೇಮಕಾತಿ ಅಕ್ರಮ ಸಂಬಂಧ ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ, ಜ್ಞಾನಜ್ಯೋತಿ ಶಾಲೆಯ ಕಾರ್ಯದರ್ಶಿ ದಿವ್ಯಾ ಹಾಗರಗಿ ಅಜ್ಞಾತಸ್ಥಳದಿಂದಲೇ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಸಿಐಡಿ ಪೊಲೀಸರು ಪ್ರಕರಣದ ತನಿಖೆ ಚುರುಕುಗೊಳಿಸುತ್ತಿದ್ದಂತೆ ತಲೆ ಮರೆಸಿಕೊಂಡಿರುವ ದಿವ್ಯಾ ಹಾಗರಗಿ ಒಂದು ವಾರವಾದರೂ ವಿಚಾರಣೆಗೆ ಹಾಜರಾಗಿಲ್ಲ. ಮನೆ ಮೇಲೆ ದಾಳಿ ಮಾಡಿ ದಿವ್ಯಾ ಅವರ ಪತಿ ರಾಜೇಶನನ್ನು ಬಂಧಿಸಿದರೂ ಇಲ್ಲಿಯವರೆಗೆ ದಿವ್ಯಾ ಪತ್ತೆಯಾಗಿಲ್ಲ.

ಸಿಐಡಿ ಪೊಲೀಸರ ಬಂಧನದ ಭೀತಿಯಿಂದಾಗಿ ಅಜ್ಞಾತ ಸ್ಥಳದಿಂದಲೇ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ವಕೀಲರ ಮೂಲಕ ಕಲಬುರಗಿ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಕೆಯಾಗಿದೆ. ದಿವ್ಯಾ ಹಾಗರಗಿ ಅಲ್ಲದೆ ಶಾಲೆಯ ಮುಖ್ಯೋಪಾಧ್ಯಾಯ ಕಾಶಿನಾಥ್, ಸಹ ಶಿಕ್ಷಕಿ ಅಶ್ವಿನಿ ಕೂಡಾ ಸಿಐಡಿ ಅಧಿಕಾರಿಗಳ ಕೈಗೆ ಸಿಗದೆ ಅಜ್ಞಾತ ಸ್ಥಳದಿಂದಲೇ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ.

ಇವರಷ್ಟೇ ಅಲ್ಲದೆ, ಸಿಐಡಿಯಿಂದ ಈಗಾಗಲೇ ಬಂಧನಕ್ಕೊಳಗಾಗಿರುವ ಜ್ಞಾನ ಜ್ಯೋತಿ ಶಾಲೆಯ ಪರೀಕ್ಷಾ ಮೇಲ್ವಿಚಾರಕರೂ ಸಹ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ



Join Whatsapp