ಪಿ.ಎಸ್.ಐ. ನೇಮಕಾತಿಯಲ್ಲಿ ಅಕ್ರಮ ವಿರೋಧಿಸಿ ಕಾಂಗ್ರೆಸ್ ನಿಂದ ಪ್ರತಿಭಟನೆ

Prasthutha|

ಬೆಂಗಳೂರು: ಪಿ.ಎಸ್.ಐ. ನೇಮಕಾತಿಯಲ್ಲಿ ಅಕ್ರಮ ಸೇರಿದಂತೆ ರಾಜ್ಯ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಕಾಂಗ್ರೆಸ್ ಬೆಂಗಳೂರು ನಗರ ಪ್ರಚಾರ ಸಮಿತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

- Advertisement -

ಸಮಿತಿಯ ಮುಖಂಡ ಎಸ್. ಮನೋಹರ್ ಜಿ. ಮಾತನಾಡಿ, ರಾಜ್ಯ ಬಿಜೆಪಿ ಸರ್ಕಾರ ನಡೆಸುತ್ತಿರುವ ಭ್ರಷ್ಟಾಚಾರ ಪಿ.ಎಸ್.ಐ. ನೇಮಕಾತಿಯಿಂದ ಹಿಡಿದು ಈಗ ಮಠಗಳ ಅಭಿವೃದ್ಧಿಗೆ ನೀಡಿದ್ದ ಅನುದಾನದಲ್ಲೂ ಶೇಕಡ 30%ರಷ್ಟು ಲಂಚ  ಪಡೆಯುತ್ತಿರುವುದು ಅತ್ಯಂತ ಶೋಚನೀಯ. ಪಿ. ಎಸ್.ಐ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಈಗಾಗಲೇ ಸಿಐಡಿ ತನಿಖೆ ನಡೆಯುತ್ತಿದೆ. ಈ ಪ್ರಕರಣದ ಪ್ರಮುಖ ಆರೋಪಿ ಬಿಜೆಪಿ ಪಕ್ಷದವರು ಎಂಬುದನ್ನು ಸರ್ಕಾರ ಒಪ್ಪಿಕೊಳ್ಳಬೇಕು.  ಪ್ರಾಮಾಣಿಕವಾಗಿ ಪರೀಕ್ಷೆ ಬರೆದು ತೇರ್ಗಡೆಯಾಗಿರುವ ವಿದ್ಯಾರ್ಥಿಗಳಿಗೆ ಬಿಜೆಪಿ ಪಕ್ಷ ಹಾಗೂ ಸರ್ಕಾರದಿಂದ  ಅನ್ಯಾಯವಾಗಿದೆ  ಎಂದು ಹೇಳಿದರು.

ಭ್ರಷ್ಟ ಬಿಜೆಪಿ ಸರ್ಕಾರ ಪ್ರತಿ ಇಲಾಖೆಯಲ್ಲೂ ಲಂಚದ ಕಾರ್ಯವನ್ನೇ ಮುಂದುವರಿಸುತ್ತಾ ಬಂದಿದೆ. ಈಗ ಮಠಗಳ ಅಭಿವೃದ್ಧಿಗೆ ಮಂಜೂರಾತಿ ಮಾಡಿರುವ ಅನುದಾನದಲ್ಲಿ ಶೇಕಡ 30% ರಷ್ಟು ಲಂಚ ಪಡೆದಿರುವ ಬಗ್ಗೆ ಸ್ವಾಮೀಜಿಗಳೇ ಬಹಿರಂಗಪಡಿಸಿದ್ದಾರೆ. ಈ ಕೂಡಲೇ  ನೈತಿಕ ಹೊಣೆ ಹೊತ್ತು ಸರ್ಕಾರವೇ ವಿಸರ್ಜಿಸಲು ಮುಖ್ಯಮಂತ್ರಿಗಳು ಮುಂದಾಗಬೇಕು, ಇಂತಹ ನೀತಿಗೆಟ್ಟ ಭ್ರಷ್ಟಾಚಾರ ಸರ್ಕಾರ ದೇಶದ ಇತಿಹಾಸದಲ್ಲೇ ಕಾಣಲು ಸಾಧ್ಯವಿಲ್ಲ. ಕಲಬುರಗಿಯ ಜ್ಞಾನಜ್ಯೋತಿ ಶಾಲೆಯ ಮುಖ್ಯಸ್ಥರೇ ಬಿಜೆಪಿಯವರು ಈಗ ವಿದ್ಯಾ  ತಲೆಮರೆಸಿಕೊಂಡಿರುವುದು ಅಕ್ರಮ ನಡೆದಿರುವುದಕ್ಕೆ ಸಾಕ್ಷಿಯಾಗಿದೆ. ಅಕ್ರಮದಲ್ಲಿ ಭಾಗಿಯಾಗಿರುವ ದಿವ್ಯಾ ಹಾಗರಗಿ ಅವರ ಪತಿ ರಾಜೇಶ್ ರನ್ನು ಈಗಾಗಲೇ ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಇಷ್ಟೆಲ್ಲ ಬೆಳವಣಿಗೆಗಳು ಕಣ್ಣು ಮುಂದೆ ನಡೆದರೂ ಬಿಜೆಪಿ ಸರ್ಕಾರ ಮೌನಕ್ಕೆ ಶರಣಾಗಿದೆ ಎಂದು ಹರಿಹಾಯ್ದರು.

- Advertisement -

ಇಂತಹ ನೀಚ ಸರ್ಕಾರ ತೊಲಗದೆ  ಹೋದರೆ ಮುಂದಿನ ದಿನಗಳಲ್ಲಿ ನಾಗರಿಕರು ಇನ್ನೂ ತೀವ್ರ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ. ಭ್ರಷ್ಟಾಚಾರದಲ್ಲೇ ಜನಿಸಿರುವ ಭ್ರಷ್ಟ ಬಿಜೆಪಿ ಸರ್ಕಾರ ಕೂಡಲೇ ನೈತಿಕ ಹೊಣೆ ಹೊತ್ತು  ತೊಲಗಬೇಕು ಹಾಗೂ ಈ ಪ್ರಕರಣದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಜನಾರ್ದನ್.ಎಲ್, ಜಯಸಿಂಹ ಹೇಮರಾಜ್, ಆದಿತ್ಯ, ಪ್ರಕಾಶ್, ನವೀನ್, ವೆಂಕಟೇಶ್, ಚಂದ್ರಶೇಖರ ಮಂಜುನಾಥ್, ಅನಿಲ್, ಪುಟ್ಟರಾಜು ಮತ್ತು ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.



Join Whatsapp