ಪಿಎಸ್ಐ ಅಕ್ರಮ ನೇಮಕಾತಿ ಹಗರಣ: ನ್ಯಾಯಯುತವಾಗಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಅನ್ಯಾಯ

Prasthutha|

ಬೆಂಗಳೂರು: ಪಿಎಸ್ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಪರ–ವಿರುದ್ಧ ರಾಜಕೀಯ ಪಕ್ಷಗಳು ಆರೋಪ, ಪ್ರತ್ಯಾರೋಪಗಳಲ್ಲಿ ತೊಡಗಿಕೊಂಡಿದ್ದು, ನ್ಯಾಯಯುತವಾಗಿ ಪರೀಕ್ಷೆ ಬರೆದು ಆಯ್ಕೆಯಾದ ತಮಗೆ ಅನ್ಯಾಯವಾಗಿದೆ ಎಂದು ಹಲವು ಅಭ್ಯರ್ಥಿಗಳು ಬೇಸರ ವ್ಯಕಪಡಿಸಿದ್ದಾರೆ.

- Advertisement -

ಕಷ್ಟಪಟ್ಟು ಓದಿ, ಪ್ರಾಮಾಣಿಕವಾಗಿ ಪರೀಕ್ಷೆ ಬರೆದು ಆಯ್ಕೆಯಾಗಿದ್ದ ನಮ್ಮ ಗೋಳು ಯಾರೂ ಕೇಳುತ್ತಿಲ್ಲ. ಕೆಲವು ಅಭ್ಯರ್ಥಿಗಳು ಮಾಡಿದ ತಪ್ಪಿಗೆ ಎಲ್ಲರಿಗೂ ಶಿಕ್ಷೆ ನೀಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಪ್ರಾಮಾಣಿಕ ಅಭ್ಯರ್ಥಿಗಳ ಹಿತ ಕಾಯಬೇಕಾದ ಸರ್ಕಾರ, ವಿರೋಧ ಪಕ್ಷಗಳು ಮೌನವಾಗಿವೆ ಎಂದು ತಮ್ಮ ಅಳಲು ತೋಡಿಕೊಂಡರು.

ಅಕ್ರಮದಲ್ಲಿ ಭಾಗಿಯಾದ ಅಭ್ಯರ್ಥಿಗಳನ್ನು ಹೊರಗಿಟ್ಟು, ಪ್ರಾಮಾಣಿಕವಾಗಿ ಆಯ್ಕೆಯಾದ ಅಭ್ಯರ್ಥಿಗಳತ್ತ ಗಮನ ಹರಿಸುತ್ತಿಲ್ಲ. ಅದರ ಬದಲು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಪರ ವಿರೋಧ ಆರೋಪಗಳನ್ನು ಹೊರಿಸುತ್ತಿದ್ದಾರೆ. ಸಹಾಯಕ ಪ್ರಾಧ್ಯಾಪಕರ ಹುದ್ದೆಗಳೂ ಸೇರಿದಂತೆ ಹಲವು ಪರೀಕ್ಷೆಗಳಲ್ಲಿ ಹಗರಣಗಳು ಕೇಳಿಬಂದಿವೆ. ಅಲ್ಲಿ ಅಕ್ರಮದಲ್ಲಿ ಭಾಗಿಯಾದವರನ್ನು ಹೊರಗಿಟ್ಟು, ಉಳಿದವರಿಗೆ ನೇಮಕಾತಿ ಆದೇಶ ನೀಡಲಾಗುತ್ತಿದೆ. ಪಿಎಸ್ಐ ಹುದ್ದೆಗಳಿಗೆ ಮಾತ್ರ ಮರು ಪರೀಕ್ಷೆಯ ಘೋಷಣೆ ಮಾಡಿರುವುದು ಸರ್ಕಾರದ ಇಬ್ಬಗೆಯ ನೀತಿಗೆ ಸಾಕ್ಷಿ ಎಂದು ಹಲವು ಅಭ್ಯರ್ಥಿಗಳು ದೂರಿದ್ದಾರೆ.



Join Whatsapp