ಗಣಪತ್ ಭಟ್ ಸಚಿವಾಲಯದ ಸಿಬ್ಬಂದಿ ಅಲ್ಲ ಎಂದ ಗೃಹ ಸಚಿವ ಆರಗ ಜ್ಞಾನೇಂದ್ರ
ಬೆಂಗಳೂರು: ಬಹುಕೋಟಿ ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಆಪ್ತ ಕಾರ್ಯದರ್ಶಿ ಗಣಪತಿ ಭಟ್ ಅವರನ್ನು ಅರೆಸ್ಟ್ ಮಾಡಲಾಗಿದೆ. ಸಿಐಡಿ ಅಧಿಕಾರಿಗಳು ಗಣಪತಿ ಭಟ್ ಅವರನ್ನು ಬಂಧಿಸಿದ್ದು, ಸಿಐಡಿ ಕಚೇರಿಗೆ ಕೊಂಡೊಯ್ಯಲಾಗಿದೆ ಎಂದು ತಿಳಿದು ಬಂದಿದೆ.
ಈ ಮಧ್ಯೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಈ ಆರೋಪವನ್ನು ನಿರಾಕರಿಸಿದ್ದು, ಬಂಧಿತ ಗಣಪತಿ ಭಟ್ ಅವರು ಗೃಹ ಸಚಿವಾಲಯದ ಸಿಬ್ಬಂದಿ ಅಲ್ಲ ಎಂದು ತಿಳಿಸಿದ್ದಾರೆ.
ಎಡಿಜಿಪಿ ಅಮೃತ ಪೌಲ್ ಅವರ ಹೇಳಿಕೆ ಆಧರಿಸಿ ಗಣಪತಿ ಭಟ್ ಅವರನ್ನು ಬಂಧಿಸಲಾಗಿದೆ. ಪಿಎಸ್‌ಐ ಅಕ್ರಮ ನೇಮಕಾತಿಯಲ್ಲಿ ಗಣಪತಿ ಭಟ್ ಅವರು ಭಾಗಿಯಾಗಿರುವ ಮಾಹಿತಿ ಲಭಿಸಿದೆ. ಗಣಪತಿ ಭಟ್ ಅವರು ಗೃಹ ಸಚಿವರ ಕಾರ್ಯದರ್ಶಿಯಾಗಿದ್ದಾರೆ. ಅಲ್ಲದೆ ಗಣಪತಿ ಭಟ್ ಅವರು ಹಲವು ಪಿಎಸ್‌ಐಗಳ ಅಕ್ರಮ ನೇಮಕಾತಿಯಲ್ಲಿ ಭಾಗಿಯಾಗಿದ್ದಾರೆ ಎಂದು ವಿಚಾರಣೆಗೊಳಪಟ್ಟ ಆರೋಪಿಗಳು ಮಾಹಿತಿ ನೀಡಿದ್ದು, ಇನ್ನಷ್ಟು ಮಾಹಿತಿಗಳು ಲಭ್ಯವಾಗಬೇಕಾಗಿದೆ.
545 ಪಿಎಸ್‌ಐ ಹುದ್ದೆಗೆ ನಡೆದ ನೇಮಕಾತಿ ಪರೀಕ್ಷೆಗೆ ನಡೆದ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ಬಿಜೆಪಿ, ಕಾಂಗ್ರೆಸ್ ಪಕ್ಷದ ಮುಖಂಡರು, ಹಿರಿಯ ಪೊಲೀಸ್ ಅಧಿಕಾರಿಗಳು ಒಳಗೊಂಡಂತೆ ಹಲವರನ್ನು ಬಂಧಿಸಿದ್ದಾರೆ.