ಬೆಂಗಳೂರು: ಪಿಎಸ್ಐ ನೇಮಕಾತಿ ಅಕ್ರಮದ ತನಿಖೆಯನ್ನು ತೀವ್ರಗೊಳಿಸಿರುವ ಸಿಐಡಿ ಅಧಿಕಾರಿಗಳು ನಗರದಲ್ಲಿ ಪರೀಕ್ಷೆ ನಡೆಸಿದ 7 ಪರೀಕ್ಷಾ ಕೇಂದ್ರಗಳ ಮೇಲೆ ದಾಳಿ ಮಾಡಿ ಮಾಹಿತಿಯನ್ನು ಸಂಗ್ರಹಿಸಲು ಮುಂದಾಗಿದ್ದಾರೆ.
ನಗರದಲ್ಲಿ ಪರೀಕ್ಷೆ ಬರೆದು ಆಯ್ಕೆಯಾದ 12 ಮಂದಿ ಅಭ್ಯರ್ಥಿಗಳನ್ನು ಬಂಧಿಸಿ ಅವರ ಜೊತೆಗೆ 10 ಮಂದಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿ ಮಾಹಿತಿಯನ್ನು ಸಂಗ್ರಹಿಸಿರುವ ಅಧಿಕಾರಿಗಳು, ಅದರ ಆಧಾರದ ಮೇಲೆ ನಗರದ 7 ಪರೀಕ್ಷಾ ಕೇಂದ್ರಗಳ ಮೇಲೂ ದಾಳಿ ನಡೆಸಲು ಮುಂದಾಗಿದ್ದಾರೆ.
ನಗರದಲ್ಲಿ ಹೆಚ್ಚಿನ ಅಕ್ರಮ ನಡೆದಿರುವುದು ಸಿಐಡಿ ಕಸ್ಟಡಿಯಲ್ಲಿರುವ ಅಭ್ಯರ್ಥಿಗಳ ಸಂಖ್ಯೆಯಿಂದ ಸಾಬೀತಾಗಿದೆ. ಅಲ್ಲದೆ, ಬಹುತೇಕ ಟಾಪರ್ಸ್‌ಗಳೇ ಹಿಟ್ ಲಿಸ್ಟ್ ನಲ್ಲಿ ಇದ್ದಾರೆ. ಪಿಎಸ್ ಐ ನೇಮಕಾತಿಯಲ್ಲಿ ನಡೆದಿರುವ ಅಕ್ರಮ ಬಗೆದಷ್ಟು ಬಯಲಾಗುತ್ತಿದೆ ತಾತ್ಕಾಲಿಕ ಪಟ್ಟಿಯಲ್ಲಿ ಆಯ್ಕೆ ಆಗಿರುವ ಟಾಪರ್ಸ್‌ಗಳೇ ಆರೋಪಿಗಳ ಪಟ್ಟಿಯಲ್ಲಿದ್ದಾರೆ.
ಈ ನಡುವೆ ಸಿಐಡಿ ಅಧಿಕಾರಿಗಳು ಕಲಬುರಗಿಯ ಜ್ಞಾನಜೋತಿ ಇಂಗ್ಲಿಷ್ ಶಾಲೆ ಜೊತೆ ಬೇರೆ ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ನಡೆದಿರುವುದನ್ನು ಪತ್ತೆಹಚ್ಚಿದ್ದಾರೆ.
ಡಿವೈಎಸ್ ಪಿ ಪ್ರಕಾಶ್ ರಾಥೋಡ್ರಿಂದ ಕಲಬುರಗಿ, ಡಿವೈಎಸ್ಪಿ ಬಿ.ಕೆ.ಶೇಖರ್ ನೇತೃತ್ವದಲ್ಲಿ ಬೆಂಗಳೂರು ಪ್ರಕರಣದ ತನಿಖೆ ನಡೆಯುತ್ತಿದ್ದು ಈಗಾಗಲೇ 12 ಜನ ಸಿಐಡಿ ವಶದಲ್ಲಿದ್ದಾರೆ. ಕಾರ್ಬನ್ ಕಾಪಿ, ಮೂಲ ಒಎಂಆರ್ ನಲ್ಲಿ ಅಕ್ರಮ ಬಯಲಾಗಿತ್ತು. ಹೀಗಾಗಿ ಪರೀಕ್ಷಾ ಅಕ್ರಮಕ್ಕೆ ಸಹಾಯ ಮಾಡಿದ್ದು ಯಾರು? ಯಾರು ಯಾರಿಗೆ ಎಷ್ಟು ಹಣ ಕೊಟ್ಟಿದ್ದಾರೆ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ.
ಹಲವು ಕೇಂದ್ರಗಳಲ್ಲಿ ಪರೀಕ್ಷೆ ಬರೆದ ಅಭ್ಯರ್ಥಿಗಳನ್ನ ಬಂಧಿಸಲಾಗಿದೆ. ಅರೆಸ್ಟ್ ಆಗಿರುವ ಎಲ್ಲರೂ ಒಂದೇ ಕೇಂದ್ರದಲ್ಲಿ ಪರೀಕ್ಷೆ ಬರೆದಿಲ್ಲ. ನೇಮಕಾತಿ ವಿಭಾಗದಲ್ಲಿ ಯಾರೋ ಸಹಾಯ ಮಾಡಿರುವ ಶಂಕೆ ಮೂಡಿದೆ. ಉತ್ತರ ಪತ್ರಿಕೆ ನೇಮಕಾತಿ ವಿಭಾಗ ಸೇರಿದ ನಂತರ ತಿದ್ದಿರುವ ಅನುಮಾನ ಇದೆ. ನೇಮಕಾತಿ ವಿಭಾಗದ ಅಧಿಕಾರಿಗಳು, ಸಿಬ್ಬಂದಿ ಶಾಮೀಲು ಆಗಿರಬಹುದು ಎಂದು ಅನುಮಾನ ಹೆಚ್ಚಾಗಿದೆ.
ಎಲೆಕ್ಟ್ರಾನಿಕ್ ಬ್ಲೂಟೂತ್ ಡಿವೈಸ್ ಬಳಸಿ ರುದ್ರಗೌಡ ಪಾಟೀಲ್ ಗ್ಯಾಂಗ್ ನಿಂದ ಕೃತ್ಯ ನಡೆದಿದ್ದು ಕೇಳಿದ್ದಷ್ಟು ಹಣ ಕೊಟ್ಟವರಿಗೆ ಪರೀಕ್ಷೆಯಲ್ಲಿ ಅಕ್ರಮ ನಡೆಸಲು ಸಹಾಯ ಮಾಡಲಾಗಿದೆ.ಇನ್ನು ಬೇರೆ ಪರೀಕ್ಷಾ ಕೇಂದ್ರದ ಸಿಬ್ಬಂದಿ ಈ ಅಕ್ರಮದಲ್ಲಿ ಭಾಗಿಯಾಗಿದ್ದಾರಾ? ಅಥವಾ ಅಭ್ಯರ್ಥಿಗಳು ಮಾತ್ರ ಅಕ್ರಮ ಮಾಡಿದ್ದಾರಾ? ಎನ್ನುವುದರ ಬಗ್ಗೆ ತನಿಖೆ ನಡೆಯುತ್ತಿದೆ.
50ಲಕ್ಷಕ್ಕೆ ಡೀಲ್ :
ಈಗಾಗಲೇ ಕಲಬುರಗಿಯ ಎಂಎಸ್ಐ ಇರಾಣಿ ಡಿಗ್ರಿ ಕಾಲೇಜ್ ಪರೀಕ್ಷಾ ಕೇಂದ್ರದಲ್ಲಿ ಪಿಎಸ್‌ಐ ಪರೀಕ್ಷೆ ಬರೆದಿದ್ದ ಪ್ರಭು ಎನ್ನುವ ಅಭ್ಯರ್ಥಿಯನ್ನು ಸಿಐಡಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಈತ ಎಲೆಕ್ಟ್ರಾನಿಕ್ ಬ್ಲೂಟೂತ್ ಡಿವೈಸ್ ಬಳಸಿ ಅಕ್ರಮವಾಗಿ ಪರೀಕ್ಷೆ ಬರೆದು ಆಯ್ಕೆಯಾಗಿದ್ದ ಎಂದು ಹೇಳಲಾಗುತ್ತಿದೆ. ರುದ್ರಗೌಡ ಪಾಟೀಲ್ನ ಅಡಿಟರ್ ಚಂದ್ರಕಾಂತ್ ಕುಲಕರ್ಣಿ ಇದರ ಡೀಲ್ ನ್ನು ಐವತ್ತು ಲಕ್ಷಕ್ಕೆ ಕುದುರಿಸಿದ್ದ ಎಂದು ತಿಳಿದುಬಂದಿದೆ.
ಪ್ರಭು ತಂದೆ ಶರಣಪ್ಪ ಚಂದ್ರಕಾಂತ ನಗರದಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದು ಮಗ ಪ್ರಭುಗೆ ಪಿಎಸ್‌ಐ ಹುದ್ದೆ ಕೊಡಿಸಲು ಸಾಲಮಾಡಿ ಕುಲಕರ್ಣಿಗೆ 50 ಲಕ್ಷ ರೂ ನೀಡಿದ್ದು ಹಣ ಪಡೆದ ಚಂದ್ರಕಾಂತ್ ಕುಲಕರ್ಣಿಯನ್ನು ಕಳೆದ ರಾತ್ರಿ ಸಿಐಡಿ ಬಂಧಿಸಿದೆ.
ಆಮಿಷ ತೋರಿಸಿ ಅಕ್ರಮ:
ಮೂವರು ಪ್ರಮುಖ ಕಿಂಗ್ಪಿನ್ಗಳಾದ ರುದ್ರಗೌಡ ಪಾಟೀಲ್, ಮಂಜುನಾಥ ಮೇಳಕುಂದಿ, ಹೆಡ್ಮಾಸ್ಟರ್ ಕಾಶಿನಾಥ್ ಸಿಐಡಿ ವಶದಲ್ಲಿದ್ದಾರೆ. ಈ ಮೂವರೇ ಅನೇಕರಿಗೆ ಹಣದ ಆಮಿಷ ತೋರಿಸಿ ಅಕ್ರಮ ಮಾಡಿಸಿದ್ದು. ಈ ಮೂವರು ನೀಡುತ್ತಿರುವ ಮಾಹಿತಿ ಮೇರೆಗೆ ಅನೇಕರನ್ನು ಬಂಧಿಸಲಾಗುತ್ತಿದೆ.
ಕಾಶಿನಾಥ್ ಸರ್ಕಾರಿ ನೌಕರಿ ಬಿಟ್ಟು ಜ್ಞಾನಜೋತಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ. ಅನುಧಾನಿತ ಪ್ರೌಢ ಶಾಲೆಯಲ್ಲಿನ ನೌಕರಿಗೆ ರಾಜೀನಾಮೆ ನೀಡಿದ್ದ. ಇಲ್ಲೇ ಸುಲಭವಾಗಿ ಲಕ್ಷ ಲಕ್ಷ ಹಣ ಗಳಿಸಲು ಪ್ರಾರಂಭಿಸಿದ್ದ. ವಿವಿಧ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅಕ್ರಮಕ್ಕೆ ಸಹಾಯ ಮಾಡುತ್ತಿದ್ದ ಎಂದು ತಿಳಿದುಬಂದಿದೆ
ಪಿಎಸ್ಐ ನೇಮಕಾತಿ ಅಕ್ರಮ: ಪರೀಕ್ಷಾ ಕೇಂದ್ರಗಳ ಮೇಲೆ ಸಿಐಡಿ ದಾಳಿ
Prasthutha|
- Advertisement -