ಮೈಸೂರು: ಪಿಎಸ್ ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಸಂಚಾರಿ ಪೊಲೀಸ್ ಠಾಣೆಯ ಪಿಎಸ್ ಐ ಅಶ್ವನಿ ಅವರನ್ನು ನಗರ ಪೊಲೀಸ್ ಕಮಿಷನರ್ ಡಾ.ಚಂದ್ರಗುಪ್ತ ಅಮಾನತುಗೊಳಿಸಿದ್ದಾರೆ.
ಮೈಸೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪಿಎಸ್ ಐ ಆಗಿದ್ದ ಅಶ್ವಿನಿ, ಪಿಎಸ್ ಐ ನೇಮಕಾತಿ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಪಿಎಸ್ ಐ ಅಶ್ವಿನಿಯವರು ಅಭ್ಯರ್ಥಿ ಜೊತೆ ಹಣಕಾಸಿನ ವಿಚಾರವಾಗಿ ಮಾತನಾಡಿದ ಆಡಿಯೋ ಮತ್ತು ಆರ್.ಟಿ.ಜಿ.ಎಸ್. ಮೂಲಕ ಹಣ ಪಡೆದಿರುವ ಬಗ್ಗೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಶನಿವಾರ ದಾಖಲೆ ಬಿಡುಗಡೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕಮಿಷನರ್ ಚಂದ್ರಗುಪ್ತ ಅವರು ಅಶ್ವಿನಿ ಅವರನ್ನು ಅಮಾನತು ಮಾಡಿದ್ದಾರೆ.
ಈ ಹಿಂದೆ ಪ್ರಕರಣದಲ್ಲಿ ಭಾಗಿಯಾಗಿದ್ದ ಎಡಿಜಿಪಿ ಅಮೃತ್ ಪಾಲ್ ಅವರನ್ನು ಬಂಧಿಸಲಾಗಿತ್ತು. ಬಂಧನದ ಬಳಿಕ ಇವರನ್ನು ಅಮಾನತು ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು.