ಫುಟ್ಬಾಲ್ ದಿಗ್ಗಜ ಲಯೊನೆಲ್ ಮೆಸ್ಸಿಗೆ ಕೋವಿಡ್-19 ಪಾಸಿಟಿವ್ !

Prasthutha|

ಪ್ಯಾರಿಸ್: ಅರ್ಜೆಂಟೀನಾ ರಾಷ್ಟ್ರೀಯ ತಂಡದ ಹಾಗೂ ಲೀಗ್-1 ಕ್ಲಬ್ ಪ್ಯಾರಿಸ್ ಸೈಂಟ್ ಜರ್ಮನ್ ತಂಡದ ಸ್ಟಾರ್ ಆಟಗಾರ ಲಯೊನೆಲ್ ಮೆಸ್ಸಿಗೆ ಕೋವಿಡ್ ಪಾಸಿಟಿವ್ ಧೃಡಪಟ್ಟಿದೆ. ಮೆಸ್ಸಿ ಜೊತೆಗೆ ಪ್ಯಾರಿಸ್ ಸೈಂಟ್ ಜರ್ಮನ್ ತಂಡದ ಇತರ ಮೂವರು ಆಟಗಾರರಿಗೂ ಕೋವಿಡ್ ಪಾಸಿಟಿವ್ ಧೃಡಪಟ್ಟಿರುವುದಾಗಿ ತಂಡದ ಆಡಳಿತ ಮಂಡಳಿ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದೆ.

- Advertisement -

PSG ತಂಡದ ಡಿಫೆಂಡರ್ ಜುವಾನ್ ಬೆರ್ನಾಟ್, ಹೆಚ್ಚುವರಿ ಗೋಲ್ ಕೀಪರ್ ಸರ್ಜಿಯೋ ರಿಕೋ ಹಾಗೂ ಮಿಡ್’ಫೀಲ್ಡರ್ ನಾಥನ್ ಬಿಟುಮ್ಝಾಲ ಕೋವಿಡ್ ಪಾಸಿಟಿವ್ ಧೃಡಪಟ್ಟಿರುವ ಇತರ ಮೂವರು ಆಟಗಾರರಾಗಿದ್ದಾರೆ. ನಾಲ್ವರು ಆಟಗಾರರು ಚಿಕಿತ್ಸೆಗಾಗಿ ಪ್ರತ್ಯೇಕ ವಲಯದಲ್ಲಿದ್ದಾರೆ ಎಂದು PSG ಟ್ವೀಟ್ ಮಾಡಿದೆ. ಲೀಗ್-1 ಟೂರ್ನಿಯಲ್ಲಿ PSG ತಂಡ ಜನವರಿ 9ರಂದು ಒಲಿಂಪಿಕ್ಯೂ ಲಿಯೋನ್ಯಾಸ್ ವಿರುದ್ಧ ತನ್ನ ಮುಂದಿನ ಪಂದ್ಯವನ್ನಾಡಲಿದ್ದು, ಈ ಪಂದ್ಯಕ್ಕೆ ಮೆಸ್ಸಿ ಸೇರಿದಂತೆ ನಾಲ್ವರು ಆಟಗಾರರು ಲಭ್ಯರಾಗುವುದು ಬಹುತೇಕ ಅನುಮಾನವಾಗಿದೆ.

ಡಿಸೆಂಬರ್’ನಲ್ಲಿ ದಾಖಲೆಯ 7ನೇ ಬಾರಿಗೆ ಜಗತ್ತಿನ ಶ್ರೇಷ್ಠ ಪುಟ್ಬಾಲಿಗ ಪ್ರಶಸ್ತಿ ‘ಬ್ಯಾಲನ್ ಡಿ’ಓರ್’ ಗೆದ್ದಿದ್ದ 34 ವರ್ಷದ ಮೆಸ್ಸಿ, ತನ್ನ ಬಾಲ್ಯಕಾಲದ ಕ್ಲಬ್ ಬಾರ್ಸಿಲೋನಾ ಬಿಟ್ಟು ಕಳೆದ ಆಗಸ್ಟ್’ನಲ್ಲಿ PSG ತಂಡವನ್ನು ಸೇರಿಕೊಂಡಿದ್ದರು. PSG ಪರವಾಗಿ ಇದುವರೆಗೂ 16 ಪಂದ್ಯಗಳನ್ನು ಆಡಿರುವ ಮೆಸ್ಸಿ 6 ಗೋಲು ಗಳಿಸಿದ್ದಾರೆ. ಲೀಗ್-1 ಟೂರ್ನಿಯಲ್ಲಿ ಇದುವರೆಗೂ 19 ಪಂದ್ಯಗಳನ್ನಾಡಿರುವ PSG 46 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿದೆ.

Join Whatsapp