ಹೈದರಾಬಾದ್: ಇಲ್ಲಿನ ಹಳೆ ನಗರದ ಶಹಾಲಿ ಬಂದ್ನಲ್ಲಿ ನಡೆಯುತ್ತಿರುವ ಪ್ರತಿಭಟನೆ ನಿನ್ನೆ ರಾತ್ರಿ ತೀವ್ರ ಸ್ವರೂಪ ಪಡೆದಿದ್ದು, ಪೊಲೀಸರು ಪ್ರತಿಭಟನಕಾರರ ವಿರುದ್ಧ ದೌರ್ಜನ್ಯ ನಡೆಸಿದ್ದಾರೆಂದು ಪ್ರತಿಭಟನಕಾರರು ಆರೋಪಿಸಿದ್ದಾರೆ.
ಪೊಲೀಸರ ಲಾಠಿ ಚಾರ್ಜಿನಲ್ಲಿ ಹಲವರು ಗಾಯಗೊಂಡಿದ್ದು, ರಾತೋರಾತ್ರಿ ಪ್ರತಿಭಟನಕಾರರ ಮನೆಗೆ ತೆರಳಿರುವ ಪೊಲೀಸರು ಹಲವರನ್ನು ಬಂಧಿಸಿದ್ದಾರೆ. ಮಹಿಳೆಯರು ಮಾತ್ರವಿರುವ ಮನೆಗಳಿಗೆ ಮಹಿಳಾ ಪೊಲೀಸರಿಲ್ಲದೇ ಅತಿಕ್ರಮಿಸಿದ್ದು ಖಂಡನೀಯ ಎಂದು ಪ್ರತಿಭಟನೆ ಆಯೋಜಕರು ಮಾಹಿತಿ ನೀಡಿದ್ದಾರೆ.
ಪ್ರತಿಭಟನೆ ಶಾಂತಿಯುತವಾಗಿ ನಡೆಯುತ್ತಿತ್ತು. ಆದರೆ ಪೊಲೀಸರೇ ಏಕಾ ಏಕಿ ಲಾಠಿ ಚಾರ್ಜ್ ನಡೆಸುವ ಮೂಲಕ ವಿಕೋಪಕ್ಕೆ ತಿರುಗಿಸಿದ್ದಾರೆಂದು ಪ್ರತಿಭಟನಕಾರರು ಆರೋಪಿಸಿದ್ದಾರೆ.
ಪ್ರವಾದಿ ಮುಹಮ್ಮದ್ ಕುರಿತಂತೆ ಅವಹೇಳನಕಾರಿ ಹೇಳಿಕೆ ನೀಡಿರುವ ಬಿಜೆಪಿಯಿಂದ ಉಚ್ಚಾಟಿತ ಶಾಸಕ ರಾಜಾ ಸಿಂಗ್ ಬಂಧನಕ್ಕೆ ಆಗ್ರಹಿಸಿ ಹೈದರಾಬಾದ್ನ ಹಳೆ ನಗರದಲ್ಲಿ ಕೆಲ ದಿನಗಳಿಂದ ಪ್ರತಿಭಟನೆ ನಡೆಯುತ್ತಿತ್ತು