ಅಹಮದಾಬಾದ್: ಪ್ರವಾದಿ ಮುಹಮ್ಮದ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರನ್ನು ಬಂಧಿಸುವಂತೆ ಆಗ್ರಹಿಸಿ ಪ್ರತಿಭಟಿಸಿದ ಹಲವರ ಮೇಲೆ ಅಹಮದಾಬಾದ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 144, 188 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಶುಕ್ರವಾರದ ನಮಾಝ್ ಬಳಿಕ ಜಮಾಲ್’ಪುರ, ಕಲುಪುರ್, ಖಾಡಿಯಾ, ಶಾಹಪುರ್, ಮಿರ್ಝಾಪುರ ಮತ್ತು ಹಳೆಯ ನಗರದಲ್ಲಿ ನೂಪುರ್ ಶರ್ಮಾ ವಿರುದ್ಧ ಮುಸ್ಲಿಮರು ಪ್ರತಿಭಟನೆ ಆಯೋಜಿಸಿದ್ದರು.
ವೀಡಿಯೋ ಚಿತ್ರೀಕರಣದ ಆಧಾರದಲ್ಲಿ ಆರೋಪಿಗಳನ್ನು ಗುರುತಿಸಲಾಗಿದ್ದು, ಪ್ರತಿಭಟನೆಯಲ್ಲಿ ಭಾಗಿಯಾದ ಇತರರನ್ನು ಪತ್ತೆ ಹಚ್ಚಲಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಇದುವರೆಗೂ ಯಾರನ್ನೂ ಬಂಧಿಸಲಾಗಿಲ್ಲ ಎಂದು ಅಹಮದಾಬಾದ್ ಉಪ ಪೊಲೀಸ್ ಆಯುಕ್ತ ಸುನೀಲ್ ಅಗರ್ವಾಲ್ ತಿಳಿಸಿದ್ದಾರೆ.