ಕೊಲಂಬೊ: ಪ್ರಧಾನಿ ಮಹಿಂದಾ ರಾಜಪಕ್ಸೆ ರಾಜೀನಾಮೆ ನೀಡಿದ ಬೆನ್ನಲ್ಲೇ ಅವರ ಕುರುನೇಗಾಲದ ನಿವಾಸಕ್ಕೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆ.
ಇಂದು ಮುಂಜಾನೆ, ಸರ್ಕಾರದ ವಿರೋಧಿ ಪ್ರತಿಭಟನಾಕಾರರು ಶ್ರೀಲಂಕಾದ ಮೊರಟುವಾ ಮೇಯರ್ ಸಮನ್ ಲಾಲ್ ಫರ್ನಾಂಡೋ ಮತ್ತು ಸಂಸದರಾದ ಸನತ್ ನಿಶಾಂತ, ರಮೇಶ್ ಪತಿರಾನ, ಮಹಿಪಾಲ ಹೆರಾತ್, ಥಿಸ್ಸಾ ಕುಟ್ಟಿಯಾರಾಚಿ ಮತ್ತು ನಿಮಲ್ ಲಾಂಜಾ ಅವರ ಅಧಿಕೃತ ನಿವಾಸಗಳಿಗೆ ಬೆಂಕಿ ಹಚ್ಚಿದರು.
ದೇಶದಲ್ಲಿ ನಡೆಯುತ್ತಿರುವ ಆರ್ಥಿಕ ಬಿಕ್ಕಟ್ಟನ್ನು ನಿಭಾಯಿಸಲು ಸರ್ವಪಕ್ಷಗಳ ಮಧ್ಯಂತರ ಸರ್ಕಾರವನ್ನು ರಚಿಸಲು ಪ್ರಧಾನಿಯವರು ತಮ್ಮ ರಾಜೀನಾಮೆಯನ್ನು ಸಲ್ಲಿಸಿದ ನಂತರವೂ ಬೆಳವಣಿಗೆಗಳು ಕಂಡು ಬಂದಿವೆ.
ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಒದ್ದಾಡ್ತಿರೋ ಶ್ರೀಲಂಕಾ ಪ್ರತಿಭಟನೆಯ ಕಿಚ್ಚಲ್ಲಿ ಬೇಯುತ್ತಿದೆ. ಮಹಿಂದಾ ರಾಜಪಕ್ಸೆ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ ಬೆನ್ನಲ್ಲೇ ಮತ್ತೆ ಪ್ರತಿಭಟನೆಗಳು ಜೋರಾಗಿವೆ. ಸರಕಾರದ ನಿಷ್ಠಾವಂತರು ಮತ್ತು ಸರ್ಕಾರ ವಿರೋಧಿ ಪ್ರತಿಭಟನಾಕಾರರ ನಡುವಿನ ಘರ್ಷಣೆಯಲ್ಲಿ ಆಡಳಿತ ಪಕ್ಷದ ಸಂಸದರೊಬ್ಬರು ಸಾವನ್ನಪ್ಪಿದ್ದು ಹಲವರು ಗಾಯಗೊಂಡಿದ್ದು ಆಸ್ಪತ್ರೆ ಸೇರಿದ್ದಾರೆ.
ಈ ಘರ್ಷಣೆಯಲ್ಲಿ 130ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಕೊಲೊಂಬೊ-ಕಾಂಡಿ ಹೆದ್ದಾರಿಯಲ್ಲಿರುವ ನಿಟ್ಟಂಬುವಾ ಪಟ್ಟಣದಲ್ಲಿ ತನ್ನ ಕಾರನ್ನು ತಡೆ ಹಿಡಿದ ಪ್ರತಿಭಟನಕಾರರ ಮೇಲೆ ಅತುಕೊರಾಲಾ ಗುಂಡು ಹಾರಿಸಿದ್ದರು. ಇದರ ಪರಿಣಾಮ ಇಬ್ಬರು ಗಾಯಗೊಂಡಿದ್ದರು. ಬಳಿಕ ಅತುಕೊರಾಲಾ ಸಮೀಪದ ಕಟ್ಟಡದಲ್ಲಿ ಆಶ್ರಯ ಪಡೆದುಕೊಳ್ಳಲು ಪ್ರಯತ್ನಿಸಿದ್ದರು. ಆದರೆ, ಅವರು ಶವವಾಗಿ ಪತ್ತೆಯಾಗಿದ್ದಾರೆ. ಅಲ್ಲಿ ಅವರು ಸ್ವಯಂ ಆಗಿ ಗುಂಡು ಹಾರಿಸಿಕೊಂಡು ಸತ್ತರೆಂದು ಘಟನೆ ವೇಳೆ ಇದ್ದವರು ಮಾಹಿತಿ ನೀಡಿದ್ಧಾರೆ. ಸ್ಥಳದಲ್ಲಿ ಸಂಸದನ ಜೊತೆ ಅವರ ಭದ್ರತಾ ಅಧಿಕಾರಿಯೂ ಸಾವನ್ನಪ್ಪಿರುವುದು ಕಂಡುಬಂದಿದೆ.