ಬೆಂಗಳೂರು: ಅಕ್ರಮವಾಗಿ ಕಾರ್ಯಾಚರಿಸುತ್ತಿರುವ ಪಬ್ ಮತ್ತು ಲೈವ್ ಬ್ಯಾಂಡ್’ಗಳನ್ನು ಬಂದ್ ಮಾಡಿಸುವಂತೆ ಒತ್ತಾಯಿಸಿ ಫೆ.25ರಂದು ಫ್ರೀಡಂ ಪಾರ್ಕ್’ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಮಿಕ ಪರಿಷತ್ತಿನ ಮಹಿಳಾ ವಿಭಾಗದ ರಾಜ್ಯಾಧ್ಯಕ್ಷೆ ಪೂಜಾ ಶೆಟ್ಟಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ನಗರದಾದ್ಯಂತ ಹೆಣ್ಣು ಮಕ್ಕಳನ್ನು ವ್ಯಾಪಾರದ ವಸ್ತುವನ್ನಾಗಿಸಿ ಗ್ರಾಹಕನ ಮುಂದೆ ಅರಬೆತ್ತಲೆಯಾಗಿ ಅಶ್ಲೀಲತೆಯಿಂದ ನಿಲ್ಲಿಸಿ ಕೆಲವು ಕಡೆ ನೃತ್ಯ ಮಾಡಿಸಿ ಗ್ರಾಹಕರು ಹಣವನ್ನು ಹೆಣ್ಣು ಮಕ್ಕಳ ಮೇಲೆ ಎಸೆಯುವುದು ಮತ್ತು ಅವರನ್ನು ಹೆಚ್ಚು ಹಣ ಎಸೆಯುವವರೊಂದಿಗೆ ವೇಶ್ಯಾವಾಟಿಕೆಗೆ ತಳ್ಳುವಂತಹ ಕೆಲಸಗಳು ಪಬ್ ಮತ್ತು ಲೈವ್ ಬ್ಯಾಂಡ್ ಮತ್ತು ಬಾರ್ ಗಳ ಹೆಸರಿನಲ್ಲಿ ಹೆಚ್ಚಾಗಿ ನಡೆಯುತ್ತಿದೆ. ಇದನ್ನು ವಿರೋಧಿಸಿ ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ ಮಹಿಳಾ ವಿಭಾಗದಿಂದ ರಾಜ್ಯದ ಹಲವಾರು ಸಂಘಟನೆಗಳ ಸಹಯೋಗದೊಂದಿಗೆ ಇದೆ ತಿಂಗಳ 25ನೇ ತಾರೀಕು ಅನಿರ್ದಿಷ್ಟವಾದಿ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಮಿಕ ಪರಿಷತ್ತಿನ ಮಹಿಳಾ ವಿಭಾಗದ ರಾಜ್ಯಾಧ್ಯಕ್ಷೆ ಪೂಜಾ ಶೆಟ್ಟಿ ತಿಳಿಸಿದರು.
ಲೈವ್ ಬ್ಯಾಂಡ್, ಪಬ್ ಮತ್ತು ಬಾರುಗಳು ಸರ್ಕಾರ ವಿಧಿಸಿದ ಸಮಯವನ್ನು ಮೀರಿ ನಡೆಯುತ್ತಿವೆ. ನ್ಯಾಯಾಲಯ ಹೊರಡಿಸಿದ ಆದೇಶವನ್ನು ಸಂಪೂರ್ಣವಾಗಿ ಗಾಳಿಗೆ ತೂರಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಇದನ್ನು ಸೂಕ್ತ ರೀತಿಯಲ್ಲಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ದೂರು ದಾಖಲಿಸಿ ಇಂತಹ ಸಮಾಜಕ್ಕೆ ಮಾರಕ ಆಗುವಂತಹ ಪಬ್ ಮತ್ತು ಲೈವ್ ಬ್ಯಾಂಡ್’ಗಳನ್ನು ಬಂದ್ ಮಾಡಿಸಬೇಕೆಂದು ಒತ್ತಾಯಿಸಿ ಅನಿರ್ದಿಷ್ಟವದಿ ಹೋರಾಟಕ್ಕೆ 25ನೇ ತಾರೀಕು ಶನಿವಾರ ಚಾಲನೆ ನೀಡಲಿದ್ದು ಈ ಹೋರಾಟದಲ್ಲಿ ಹಲವಾರು ಮಹಿಳಾ ಪರ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ದಲಿತ ಪರ ಸಂಘಟನೆಗಳು, ರೈತ ಪರ ಸಂಘಟನೆಗಳು, ಚಾಲಕ ಪರ ಮತ್ತು ಕಾರ್ಮಿಕ ಪರ ಸಂಘಟನೆಗಳು ಪಾಲ್ಗೊಳ್ಳಲಿವೆ. ತಮಟೆ ಚಳುವಳಿ, ಭಿತ್ತಿಪತ್ರ ಚಳುವಳಿ, ಹಾಗೂ ಗೃಹಮಂತ್ರಿಗಳ ಗೃಹ ಕಚೇರಿ ಚಲೋ ಚಳುವಳಿಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ. ರವಿ ಶೆಟ್ಟಿ ಬೈಂದೂರ್ ತಿಳಿಸಿದರು,
ಕಾರ್ಮಿಕ ಪರಿಷತ್ ಕೇಂದ್ರ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಚಾಲಕರ ವಿಭಾಗದ ರಾಜ್ಯಾಧ್ಯಕ್ಷ ಮಣಿಕಂಠ, ಅಲ್ಪಸಂಖ್ಯಾತರ ವಿಭಾಗದ ರಾಜ್ಯಾಧ್ಯಕ್ಷ ಜಾಬೀರ್ ಆತ್ತಾಸ್, ರಾಜ್ಯ ಕಾರ್ಯದರ್ಶಿ ಹರೀಶ್ ಶೆಟ್ಟಿ, ರಾಜ್ಯ ವಕ್ತಾರರಾದ ಸ್ವಾಮಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.