ವಿದ್ಯುತ್ ಗುತ್ತಿಗೆದಾರರ ಅನಿರ್ಧಿಷ್ಟಾವಧಿ ಪ್ರತಿಭಟನೆ ವಾಪಸ್| ಡಿ.9ರಂದು ಗುತ್ತಿಗೆದಾರರೊಂದಿಗೆ ಇಂಧನ ಸಚಿವರ ಸಭೆ

Prasthutha|

- Advertisement -

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ  ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ಇಂದು ರಾಜ್ಯ ಸರ್ಕಾರದ ಸಕಾರಾತ್ಮಕ ಭರವಸೆಯಿಂದ ಅಂತ್ಯಗೊಂಡಿದೆ

ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಸಾವಿರಾರು ಮಂದಿ ವಿದ್ಯುತ್ ಗುತ್ತಿಗೆದಾರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

- Advertisement -

ಸಂಘದ ಅಧ್ಯಕ್ಷ ಸಿ.ರಮೇಶ್ ಮಾತನಾಡಿ, ನಮ್ಮ ಬೇಡಿಕೆಗಳ ಕುರಿತು ಸರ್ಕಾರಕ್ಕೆ ಹಲವು ಬಾರಿ ಮನವರಿಕೆ ಮಾಡಿಕೊಡಲಾಗಿದೆ. ಇಂಧನ ಸಚಿವ ಸುನೀಲ್ ಕುಮಾರ್ ಅವರು ದೂರವಾಣಿ ಮಾತನಾಡಿ ಇದೇ ಒಂಬತ್ತರಂದು ತಮ್ಮ ಪದಾಧಿಕಾರಿಗಳ ಜತೆ ಬೆಂಗಳೂರಿನಲ್ಲಿ ಸುದೀರ್ಘ ಸಭೆ ನಡೆಸಿ ತಮ್ಮ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ. ಸಚಿವರು ನಮ್ಮ ಭರವಸೆಗಳನ್ನು ಈಡೇರಿಸಿದರೆ ಬರುವ ಜನವರಿಯ 7, 8ರಂದು ಗುತ್ತಿಗೆದಾರರ ಸಂಘದ ಶತಮಾನೋತ್ಸವ ಅದ್ದೂರಿಯಾಗಿ ಆಚರಿಸಲಾಗುವುದು. ಒಂದು ವೇಳೆ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಹೇಳಿದರು.

ಹಾಲಿ ಸಣ್ಣ ಸಣ್ಣ ಕಾಮಗಾರಿಗಳನ್ನು ಕ್ರೋಡೀಕರಿಸಿ ಬೃಹತ್ ಟೆಂಡರ್ ಕರೆದಿರುವುದನ್ನು ರದ್ದುಪಡಿಸಿ ಸರ್ಕಾರದ ಆದೇಶದಂತೆ ಒಂದು ಲಕ್ಷದಿಂದ ಐದು ಲಕ್ಷದವರೆಗೆ ಇರುವ ಆದೇಶವನ್ನು ಜಾರಿಮಾಡಿ ಸ್ಥಳೀಯ ಗುತ್ತಿಗೆದಾರರಿಗೆ ಅವಕಾಶ ನೀಡಬೇಕೆಂದು ಒತ್ತಾಯಿಸಿದರು.

ತತ್ಕಾಲ್ ಯೋಜನೆಯಡಿ ವಿದ್ಯುತ್ ಗುತ್ತಿಗೆದಾರರಿಗೆ ಅನುಕೂಲವಾಗುವಂತೆ ಅನುದಾನ ಒದಗಿಸಲಾಗುವುದು ಸಂಬಂಧಿಸಿದ ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಇಡೀ ರಾಜ್ಯದಲ್ಲಿ ಮೂವತ್ತು ಸಾವಿರ ಗುತ್ತಿಗೆದಾರರು ಕಾರ್ಯನಿರ್ವಹಿಸುತ್ತಿದ್ದು. ಸಾವಿರಾರು ಮಂದಿ ಕೆಲಸ ನಿರ್ವಹಿಸುತ್ತಿದ್ದಾರೆ. ಅವರ ರಕ್ಷಣೆಗರ ಸರ್ಕಾರ ಮುಂದಾಗಬೇಕು. ಬೆಳಕು ಯೋಜನೆಯಡಿ ಬೆಸ್ಕಾಂ ನೀಡಿರುವ ದರವನ್ನು ಎಲ್ಲ ಎಸ್ಕಾಂಗಳಿಗೂ ಜಾರಿಗೊಳಿಸಬೇಕು, ಬೆಳಕು ಯೋಜನೆಯಡಿ ಕಾಮಗಾರಿ ನಿರ್ವಹಿಸುವ ಬಿಲ್ ಗಳಿಗೆ ಕೂಡಲೇ ಬಜೆಟ್ ನೀಡಬೇಕೆಂದು ಹೇಳಿದರು.

ರೈತರ ಕೃಷಿ ಪಂಪ್ ಸೆಟ್ ಗಳಿಗೆ ತತ್ಕಾಲ್ ಯೋಜನೆಗೆ ಕಳೆದ ಒಂದು ವರ್ಷದಲ್ಲಿ ಯಾವುದೇ ಅನುದಾನವನ್ನು ನೀಡಿರುವುದಿಲ್ಲ. ಲಕ್ಷಾಂತರ ರೈತರಿಗೆ ಅನುಕೂಲಕವಾಗುವಂತೆ ಕೂಡಲೇ ಅನುದಾನ ಒದಗಿಸ ಬೇಕೆಂದು ತಿಳಿಸಿದರು.

ಹಾಲಿ ಇರುವ ಕ್ಲಾಸ್ 2 ಪರವಾನಿಗೆಯಿಂದ ಕ್ಲಾಸ್ 1ಪರವಾನಿಗೆಗೆ ಮೇಲ್ದರ್ಜೆಗೆ ಏರಿಸಲು ಅನುಭವ ಆಧಾರದ ಮೇಲೆ ಲೈಸನ್ಸ್  ನೀಡಬೇಕು ಎಂದು ಹೇಳಿದರು.

ವಿವಿಧ ಜಿಲ್ಲೆಗಳಿಂದ ವಿದ್ಯುತ್ ಗುತ್ತಿಗೆದಾರ ಸಂಘದ ಪದಾಧಿಕಾರಿಗಳು ಪ್ರತಿಭಟನೆ ಯಲ್ಲಿ ಭಾಗವಹಿಸಿದ್ದರು. ಕೂಡಲೇ ಸಚಿವರು, ಸರ್ಕಾರದ ಪ್ರತಿನಿಧಿಗಳು ಸ್ಥಳಕ್ಕೆ ಆಗಮಿಸಿ ನಮ್ಮ ಸಮಸ್ಯೆಗಳನ್ನು ಅಲಿಸಿ, ಸೂಕ್ತ ಆದೇಶ ನೀಡಬೇಕೆಂದು ಆಗ್ರಹಿಸಿದರು.

ಅಧ್ಯಕ್ಷರ ಮನವಿ ಮೇರೆಗೆ ಪ್ರತಿಭಟನೆಯನ್ನು ವಾಪಸ್ ಪಡೆಯಲಾಯಿತು.

ಪ್ರತಿಭಟನೆಯಲ್ಲಿ ಸಂಘದ ವಿವಿಧ ಪದಾಧಿಕಾರಿಗಳು ಭಾಗವಹಿಸಿದ್ದರು.



Join Whatsapp