ಬೆಂಗಳೂರು: ಕರ್ನಾಟಕ ರಾಜ್ಯ ಸರಕಾರಿ ಕಂದಾಯ ಇಲಾಖೆ ಗ್ರಾಮ ಸಹಾಯಕರ ಸಂಘವು ಕಂದಾಯ ಇಲಾಖೆಯಲ್ಲಿ 43 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಗ್ರಾಮ ಸಹಾಯಕರ ಹುದ್ದೆಯನ್ನು ‘ಡಿ’ ದರ್ಜೆಗೇರಿಸಿ ಸೇವಾ ಭದ್ರತೆ ಒದಗಿಸುವಂತೆ ಒತ್ತಾಯಿಸಿ ಗ್ರಾಮ ಸಹಾಯಕರ ನಡೆ ಬೆಂಗಳೂರು ಕಡೆ ಎಂಬ ಘೋಷಣೆಯೊಂದಿಗೆ ವಿಧಾನಸೌಧ ಮುತ್ತಿಗೆ ಮತ್ತು ಅನಿರ್ಧಿಷ್ಟವಾದಿ ಮುಷ್ಕರವನ್ನು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಕೈಗೊಂಡಿದೆ.
ಈ ಸಂದರ್ಭ ಪ್ರಸ್ತುತ ನ್ಯೂಸ್ ಜೊತೆ ಮಾತನಾಡಿದ ರಾಜ್ಯಾಧ್ಯಕ್ಷ ದೇವರಾಜ್ ಹೆಚ್.ಎನ್. ಸರಕಾರವು ಗ್ರಾಮ ಸಹಾಯಕರನ್ನು ಅತ್ಯಂತ ನಿಕೃಷ್ಟವಾಗಿ ನೋಡುತ್ತಿದೆ. ನಮ್ಮ ಬೇಡಿಕೆಗಳನ್ನು ಸರಕಾರ ಪೂರೈಸದೇ ಇದ್ದಲ್ಲಿ ಅಥವಾ ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಬಂದು ನಮ್ಮ ಬೇಡಿಕೆಯನ್ನು ಸ್ವೀಕರಿಸದಿದ್ದಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಮತ್ತು ಮುಷ್ಕರವನ್ನು ಮುಂದುವರಿಸುತ್ತೇವೆ. ಬಡಜನರು ಎಂಬ ಕಾರಣಕ್ಕಾಗಿ ಮತ್ತು ಕೇಳುವವರು ಯಾರು ಇಲ್ಲ ಎಂದು ಸರಕಾರ ಈ ರೀತಿ ಅನುಸರಿಸುತ್ತಿದೆ. ಪ್ರತಿದಿನ ಏರಿಕೆಯಾಗುತ್ತಿರುವ ಬೆಲೆಯೇರಿಕೆಯಿಂದ ಕಂಗಲಾಗಿರುವ ಗ್ರಾಮ ಸಹಾಯಕರು ಏನು ಮಾಡಬೇಕೆಂದು ಸರಕಾರವೇ ತಿಳಿಸಲಿ ಎಂದು ಹೇಳಿದ್ದಾರೆ.
ಪ್ರತಿಭಟನಾಕಾರರ ಪ್ರಮುಖ ಬೇಡಿಕೆಗಳೆಂದರೆ, ಎ.ಜಿ.ರವರ ವರದಿಯಂತೆ ಡಿ ದರ್ಜೆ ನೌಕರರೆಂದು ಪರಿಗಣಿಸಬೇಕು. ಅಧಿವೇಶನದಲ್ಲಿ ಕನಿಷ್ಠ ವೇತನ 21,000 ರೂಪಾಯಿ ಘೋಷಣೆ ಮಾಡಬೇಕು. ನಿವೃತ್ತಿಯಾಗುವ ನೌಕರರಿಗೆ 2 ಲಕ್ಷ ಇಡಿಗಂಟು ನೀಡಬೇಕು ಹಾಗೂ ಮಾಸಿಕ ರೂ. 5 ಸಾವಿರ ವಿಶ್ರಾಂತಿ ನೀಡಬೇಕು. ಕೋವಿಡ್ ಸಾಂಕ್ರಾಮಿಕ ರೋಗದಿಂದ ಮೃತರಾದ ಗ್ರಾಮ ಸಹಾಯಕರಿಗೆ 30 ಲಕ್ಷ ವಿಮಾ ಸೌಲಭ್ಯ ಹಣಕಾಸು ಇಲಾಖೆಯಿಂದ ಅನುಮೋದನೆಯಾಗಬೇಕು. ಗ್ರಾಮ ಸಹಾಯಕರನ್ನು ಸರ್ಕಾರಿ ಕಚೇರಿಗಳಲ್ಲಿ ರಾತ್ರಿ ಕಾವಲಿಗೆ ಮತ್ತು ಚೆಕ್ ಪೋಸ್ಟ್ ಹಾಗೂ ಕಚೇರಿಗಳ ಗೇಟ್ ಕಾವಲುಗಳಿಗೆ ನೇಮಿಸದಂತೆ ಜಿಲ್ಲಾಧಿಕಾರಿಗಳಿಗೆ ಕಟ್ಟು ನಿಟ್ಟಿನ ಆದೇಶ ನೀಡುವುದು.